ನವದೆಹಲಿ, ಮಾ 11 (DajiworldNews/AA): ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಹೆಚ್ಚಿನ ಸಮಯ ಕೋರಿ ಎಸ್ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ನಾಳೆಯೇ ಮಾಹಿತಿಯನ್ನು ಬಂಹಿರಂಗಪಡಿಸಬೇಕೆಂದು ಸುಪ್ರೀಂ ಇಂದು ಸೂಚನೆ ನೀಡಿದೆ.
ಚುನಾವಣಾ ಬಾಂಡ್ ಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಎಸ್ಬಿಐ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಅರ್ಜಿಯನ್ನು ವಜಾಗೊಳಿಸಿ, ಭಾರತೀಯ ಚುನಾವಣಾ ಆಯೋಗಕ್ಕೆ ಮಾ. 15ರೊಳಗೆ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ವಿವರಗಳನ್ನು ಪ್ರಕಟಿಸುವಂತೆ ಹೇಳಿದೆ.
ಈ ಹಿಂದೆ ಎಸ್ಬಿಐ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ವಿಚಾರಣೆ ವೇಳೆ ಬಾಂಡ್ ಗಳ ಮಾಹಿತಿ ನೀಡಲು ಕಾಲಾವಕಾಶ ಕೋರಿದ್ದರು. ಇದೀಗ ನ್ಯಾಯಾಲಯವು ಬಾಂಡ್ಗಳ ಖರೀದಿಯ ಬಗ್ಗೆ ಮಾಹಿತಿ ನೀಡುವಂತೆ ಎಸ್ಬಿಐಗೆ ಸೂಚಿಸಿದೆ.