ಬೆಂಗಳೂರು, ಮಾ 11 (DajiworldNews/AA): ರಾಜ್ಯಾದ್ಯಂತ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ರಾಸಾಯನಿಕ ಅಂಶಗಳ ಬಳಕೆಯ ಕುರಿತಂತೆ ಇಂದು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ಕುರಿತು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಲಿದ್ದು, ಈಗಾಗಲೆ ಸರ್ಕಾರದ ಕೈ ಸೇರಿರುವ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಪರೀಕ್ಷಾ ವರದಿಯ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ರಾಜ್ಯಾದ್ಯಂತ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ತಯಾರಿಕೆಯಲ್ಲಿ ರಾಸಾಯನಿಕ ಅಂಶಗಳನ್ನು ಬಳಸಲಾಗುತ್ತಿದ್ದು, ಇದು ಆರೋಗ್ಯಕ್ಕೆ ಮಾರಕವೆಂದು ಪತ್ತೆಯಾಗಿದೆ. ಈ ಹಿನ್ನೆಲೆ ರಾಜ್ಯದಾದ್ಯಂತ ಮಾರಾಟವಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ರಾಜ್ಯಾದ್ಯಂತ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಕೆ ಹಾಗೂ ಕಾಟನ್ ಕ್ಯಾಂಡಿಯಲ್ಲಿ ‘ರೋಡಮೈನ್–ಬಿ’ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪತ್ತೆಯಾಗಿದೆ. ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳಲ್ಲಿ 100ಕ್ಕೂ ಹೆಚ್ಚು ಕಡೆಯ ಗೋಬಿ ಮಂಚೂರಿ ಮಾದರಿಗಳು ಅಸುರಕ್ಷಿತ ಎಂದು ಪತ್ತೆಯಾಗಿದೆ. ಜೊತೆಗೆ ಕಾಟನ್ ಕ್ಯಾಂಡಿಯಲ್ಲೂ ಆರೋಗ್ಯಕ್ಕೆ ಮಾರಕವಾದ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆ ತಜ್ಞರು ಕೂಡಾ ಈ ಆಹಾರ ಸೇವನೆ ಅಪಾಯಕಾರಿ ಎಂದು ತಿಳಿಸಿದ್ದಾರೆ.