ಉತ್ತರ ಪ್ರದೇಶ, ಮಾ 08 (DajiworldNews/AA): ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿಯಲ್ಲಿ ತೇರ್ಗಡೆ ಹೊಂದಲು ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಅಗತ್ಯ. ಇದೇ ರೀತಿ ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅನನ್ಯಾ ಸಿಂಗ್ ಅವರ ಯಶೋಗಾಥೆ ಇದು.
ಅನನ್ಯಾ ಸಿಂಗ್ ಅವರು ಮೂಲತಃ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯವರು. ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅವರು ತುಂಬಾ ಪ್ರತಿಭಾವಂತರಾಗಿದ್ದರು. 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅನನ್ಯಾ ಅವರು 96% ಮತ್ತು 12 ನೇ ತರಗತಿಯಲ್ಲಿ 98.25% ಗಳಿಸಿದ್ದರು. ಈ ಮೂಲಕ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದರು. ಆ ಬಳಿಕ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.
ಅನನ್ಯಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿತ್ತು. ಈ ಹಿನ್ನೆಲೆ ಅರ್ಥಶಾಸ್ತ್ರದಲ್ಲಿ ಪದವಿ ಗಳಿಸಿದ ಬಳಿಕ ಅನನ್ಯಾ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಸಿದ್ದರಾಗುತ್ತಾರೆ. 2019 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 5 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಕೇವಲ 22 ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುತ್ತಾರೆ.
ಅನನ್ಯಾ ಸಿಂಗ್ ಯಾವುದೇ ತರಬೇತಿಯನ್ನು ಪಡೆಯದೇ, ಸ್ವಯಂ ಅಧ್ಯಯನದ ಮೂಲಕವೇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇನ್ನು ದಿನಕ್ಕೆ 7-8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.
ಪ್ರಸ್ತುತ ಅವರು ಪಶ್ಚಿಮ ಬಂಗಾಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂ ನಲ್ಲಿ 41,700 ಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.