ಮಂಡ್ಯ, ಮಾ 10(DaijiworldNews/AK): ಸುಳ್ಳುರಾಮಯ್ಯ ಬಿರುದಾಂಕಿತರಾದ ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಕೊನೆಗೂ ಸತ್ಯ ಕಕ್ಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ, ಕಾಂಗ್ರೆಸ್ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿದ ಹೆಚ್ಡಿಕೆ, ಮಂಡ್ಯ ಜಿಲ್ಲೆಯ ಗ್ಯಾರಂಟಿಗಳ 2ನೇ ಸಮಾವೇಶದಲ್ಲಿ ಅಲವತ್ತುಕೊಂಡ ಸಿಎಂ ಸಿದ್ದರಾಮಯ್ಯನವರೇ.. ಕೊನೆಗೂ ಸತ್ಯ ನುಡಿದಿದ್ದೀರಿ! ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ! ಸುಳ್ಳುರಾಮಯ್ಯನೆಂಬ ಕುಖ್ಯಾತಿಯಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ ಅಭಿನಂದನೆಗಳು ಎಂದು ಎಂದಿದ್ದಾರೆ.
ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿತುಪ್ಪದಂತೆ.. ಕಕ್ಕಲೇಬೇಕು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ.. ಸುಮಲತಾ ಬಿಜೆಪಿಯಿಂದ ಗೆದ್ದಿದ್ದಲ್ಲ. ಕಾಂಗ್ರೆಸ್ ವೋಟುಗಳಿಂದಲೇ ಗೆದ್ದಿದ್ದು ಆಯಮ್ಮ..!!” ಎಂದರು.
ನಿಮ್ಮ ಗೋಮುಖವ್ಯಾಘ್ರತನ ಅರಿಯಲು ಇಷ್ಟು ಸಾಕು. ಅಂದು ಕಾಂಗ್ರೆಸ್ ಮೈತ್ರಿ ಪಕ್ಷ, ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ. ಅವರ ಜತೆಯಲ್ಲೇ ಪ್ರಚಾರದ ಸೋಗಿನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆಂದು ಪೋಸು ಕೊಡುತ್ತಲೇ ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೆ ಮತ್ತ್ಯಾರು ಸಿದ್ದರಾಮಯ್ಯನವರೇ?” ಎಂದು ಎಕ್ಸ್ನಲ್ಲಿ ಹಿಗ್ಗಾಮಗ್ಗಾ ಹೆಚ್ಡಿಕೆ ಹರಿಹಾಯ್ದಿದ್ದಾರೆ.