ಮಂಗಳೂರು, ಮಾ 08 (DaijiworldNews/MS): ಕೇಂದ್ರ ಸಾಹಿತ್ಯ ಅಕಾಡೆಮಿಯ 70ನೇ ವಾರ್ಷಿಕೋತ್ಸವ ಅಂಗವಾಗಿ ’ವಿಶ್ವದ ಅತಿದೊಡ್ಡ ಸಾಹಿತ್ಯೋತ್ಸವ’(World's largest literary festival-'Sahityotsav' ) ನವದೆಹಲಿಯಲ್ಲಿ ನಡೆಯಲಿದೆ. ಈ ಐತಿಹಾಸಿಕ ಉತ್ಸವವು ಮಾರ್ಚ್ 11 ರಿಂದ 16ರವರೆಗೆ ನಡೆಯಲಿದ್ದು, ಇದರಲ್ಲಿ 175 ಕ್ಕೂ ಹೆಚ್ಚು ಭಾಷೆಗಳನ್ನು ಪ್ರತಿನಿಧಿಸುವ 1,100 ಕ್ಕೂ ಹೆಚ್ಚು ಬರಹಗಾರರು, ಸಾಹಿತಿಗಳು ಮತ್ತು ವಿದ್ವಾಂಸರು ಭಾಗವಹಿಸಲಿದ್ದಾರೆ.
ಬಹುಭಾಷಾ ಕವನ ವಾಚನ ಮತ್ತು ಸಣ್ಣ ಕಥೆಯ ವಾಚನ, ಯುವ ಸಾಹಿತಿ, ಅಸ್ಮಿತಾ, ಭಾರತದಲ್ಲಿ ಭಕ್ತಿ ಸಾಹಿತ್ಯ, ಭಾರತದಲ್ಲಿ ಮಕ್ಕಳ ಸಾಹಿತ್ಯ, ಭಾರತದ ಕಲ್ಪನೆ, ಮಾತೃಭಾಷೆಗಳ ಪ್ರಾಮುಖ್ಯತೆ, ಬುಡಕಟ್ಟು ಕವಿಗಳು ಮತ್ತು ಬರಹಗಾರರ ಸಭೆ, ಭವಿಷ್ಯದ ಕಾದಂಬರಿಗಳು, ರಂಗಭೂಮಿ ಕುರಿತು ಚರ್ಚೆಗಳು ಸಾಹಿತ್ಯ ಉತ್ಸವದ ಕೆಲವು ಪ್ರಮುಖ ಅಂಶಗಳಾಗಿವೆ.
ಈ ಸಾಹಿತ್ಯ ಉತ್ಸವದಲ್ಲಿ ಕರ್ನಾಟಕ ಕರಾವಳಿ ಭಾಗದ ಪ್ರಮುಖರು ಭಾಗವಹಿಸಲಿದ್ದು, "ಮಾತೃಭಾಷೆಗಳ ಪ್ರಾಮುಖ್ಯತೆ" ಕುರಿತಂತೆ ಕೊಂಕಣಿ ಕವಿ, ಕವಿತಾ ಟ್ರಸ್ಟ್ ಸಂಸ್ಥಾಪಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕ ಮೆಲ್ವಿನ್ ರೊಡ್ರಿಗಸ್ ವಿಚಾರಗೋಷ್ಟಿಯಲ್ಲಿ ಭಾಗವಹಿಸಲಿದ್ದಾರೆ. ಸಾಂಗ್ಸ್ ಆ ದಿ ಸಾಯಿಲ್(Songs of the Soil) ಶಮೀಮಾ ಕುತ್ತಾರು (ಬ್ಯಾರಿ), ಕಿಶೋರ್ ಕುಮಾರ್ ಶೇಣಿ (ತುಳು), "ಯುವ ಸಾಹಿತಿ" ವಿಚಾರವಾಗಿ ಸ್ಮಿತಾ ಶೆಣೈ ಕವನ ವಾಚನ ನಡೆಸಲಿದ್ದಾರೆ "ವಾಟ್ ಲಿಟರೇಚರ್ ಮೀನ್ಸ್ ಟು ಮೀ" ವಿಚಾರವಾಗಿ ಫಾ. ಮೆಲ್ವಿನ್ ಪಿಂಟೊ(ಕೊಂಕಣಿ) ವಿಚಾರಗೋಷ್ಟಿಯಲ್ಲಿ ಭಾಗವಹಿಸಲಿದ್ದಾರೆ.
ಆರು ದಿನಗಳ ಉತ್ಸವದಲ್ಲಿ 190 ಕ್ಕೂ ಹೆಚ್ಚು ಅಧಿವೇಶನಗಳು ನಡೆಯಲಿದ್ದು, ಸಾಹಿತ್ಯಿಕ ಚರ್ಚೆಗಳಿಗೆ ವೈವಿಧ್ಯಮಯ ಮತ್ತು ಬಹುಭಾಷಾ ವೇದಿಕೆಯನ್ನು ನೀಡಲಿದೆ.
ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಗಳು ಮತ್ತು ಸಾಹಿತ್ಯ ರಸಪ್ರಶ್ನೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ದೆಹಲಿ ಮತ್ತು ಎನ್ಸಿಆರ್ನಿಂದ 1000 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟಾರೆ ಈ ಉತ್ಸವವು ವಿವಿಧ ಭಾರತೀಯ ಭಾಷೆಗಳ ಖ್ಯಾತ ಬರಹಗಾರರು ಮತ್ತು ವಿದ್ವಾಂಸರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.