ಬಸವ ಕಲ್ಯಾಣ,ಮಾ 07 (DaijiworldNews/AK):ಮುಂದಿನ ವರ್ಷ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಘೋಷಿಸಿದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಚಾರಿತ್ರಿಕ ಸಂಗತಿಗಾಗಿ 160 ಮಂದಿ ಶರಣ ಸ್ವಾಮೀಜಿಗಳು, ಗುರುಗಳು ಹಾಗೂ ವೀರಶೈವ- ಲಿಂಗಾಯತ ಮಠಾಧೀಶ ಸಮುದಾಯದಿಂದ ಅಭೂತಪೂರ್ವ ಸನ್ಮಾನ ಸ್ವೀಕರಿಸಿ ಮಾತನಾಡಿ,ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕರಾಗಿ ಘೋಷಿಸಿದೆವು.ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಇಂದು, ನಾಳೆ ಮಾತ್ರವಲ್ಲ ಯಾವತ್ತೂ ಶಾಶ್ವತ ಎಂದರು.
ಇಡಿ ಜಗತ್ತಿಗೆ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದ್ದು ಬಸವಾದಿ ಶರಣರು. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಇರುವ ಮೌಲ್ಯಗಳಲ್ಲೆವೂ ಬಸವಾದಿ ಶರಣರ ಆಶಯಗಳಲ್ಲಿವೆ ಎಂದು ವಿವರಿಸಿದರು.
ಕಾಯಕ, ಉತ್ಪಾದನೆ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12 ನೇ ಶತಮಾನದಲ್ಲೇ ಸಾರಿದ್ದಾರೆ ಎಂದರು.
ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣರ ಭಾವಚಿತ್ರ ಕಡ್ಡಾಯಗೊಳಿಸಿದೆ.
ಲಕ್ಷಾಂತರ ಕನ್ನಡಿಗರ ಸಾಕ್ಷಿಯಾಗಿ ನಾನು ಬಸವ ಜಯಂತಿಯಂದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ ಎಂದರು.