ಕಲಬುರಗಿ, ಮಾ 07 (DaijiworldNews/AK): ಮುಟ್ಟಿನ ವಿಚಾರದಲ್ಲಿ ಮಡಿವಂತಿಕೆ ಇದೆ. ಆ ಮನಸ್ಥಿತಿ ಈಗ ಬದಲಾಗಬೇಕಿದೆ. ಅ ನಿಟ್ಟಿನಲ್ಲಿ ಮುಟ್ಟಿನ ಕಪ್ ವಿತರಣೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಆರ್.ಗುಂಡೂರಾವ್ ಹೇಳಿದರು.
ನಗರದ ಪಿಡಿಎ ಕಾಲೇಜಿನ ಸಂಚೂನರಿ ಹಾಲ್ನಲ್ಲಿ ಗುರುವಾರ ಆರೋಗ್ಯ ಇಲಾಖೆ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಕೆಕೆಆರ್ ಡಿಬಿ ಸಹಯೋಗದಲ್ಲಿ ಪ್ರೇರಣಾ ಮತ್ತು ಆಶಾಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಿಳೆಯರಿಗೆ ಮಾಸಿಕವಾಗಿ ಆಗುವ ಮುಟ್ಟು ಅಪಶಕುನ ಅಲ್ಲ. ಅದೊಂದು ನೈಸರ್ಗಿಕ ಕ್ರಿಯೆ. ಅದು ಅಶುದ್ಧವೂ ಅಲ್ಲ. ಈ ಹಂತದಲ್ಲಿ ಹೆಣ್ಣು ಮಕ್ಕಳಿಗೆ ಕುಟುಂಬ ಮತ್ತು ಗಂಡಸರೂ ಕೂಡ ಬೆಂಬಲ ಕೊಡಬೇಕಿದೆ. ಆಗಲೇ ಆಕೆಯ ಆರೋಗ್ಯ ನಳನಳಿಸಲಿದೆ ಎಂದರು.
ಸ್ಯಾನಿಟರ್ ಪ್ಯಾಡ್ ಬದಲು ಮುಟ್ಟಿನ ಕಪ್ ನೀಡಲಾಗುತ್ತಿದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಕಡಿಮೆ ಬೆಲೆಯಲ್ಲಿ ಇದನ್ನು ನೀಡಲಾಗುತ್ತದೆ. ಒಂದು ಕಪ್ 5ರಿಂದ 6 ವರ್ಷ ಉಪಯೋಗ ಮಾಡಬಹುದು. ಈಗಾಗಲೇ ಈ ಕುರಿತು ಪ್ರಯೋಗಾತ್ಮಕವಾಗಿ ಪರೀಕ್ಷೆ ಮಾಡಲಾಗಿದೆ. ಇದು ಬಹಳಷ್ಟು ಸುರಕ್ಷಿತವಾಗಿದೆ. ಆದ್ದರಿಂದ ಹೆಚ್ಚಿನ ರೀತಿಯಲ್ಲಿ ಕಪ್ ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಕಲಬುರಗಿ ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 1.12 ಕೋಟಿ ಜನರ ಕಣ್ಣು ಪರೀಕ್ಷೆ ಮಾಡುವ ಗುರಿ ಹೊಂದಿದೆ. ಹಾಗೇ ಪರೀಕ್ಷೆ ಮಾಡಿದವರಿಗೆ ಈಗಾಗಲೇ 3.32 ಲಕ್ಷ ಕನ್ನಡಕ ವಿತರಣೆ ಮಾಡಲಾಗಿದೆ. ಈಗಾಗಲೇ 21 ಲಕ್ಷ ಜನರಿಗೆ ಸ್ತ್ರೀ ನಿಂ ಗ್ ಮಾಡಲಾಗಿದೆ. ಅವರಲ್ಲಿ 75,200 ಜನರಿಗೆ ಸರ್ಜರಿ ಮಾಡಲಾಗಿದೆ. ಇದಕ್ಕಾಗಿ ರೂ 61 ಕೋಟಿ ವ್ಯಯಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದ ಪ್ರತಿಯೊಬ್ಬರು ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.