ಬೆಂಗಳೂರು, ಮಾ 07 (DaijiworldNews/AA): ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಇಂದು ದೆಹಲಿಯಲ್ಲಿ ನಡೆಯುವ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಸಭೆಯ ಬಳಿಕ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.
ಇಂದು ನಡೆಯುವ ಸಭೆಯಲ್ಲಿ ಸಮಾಲೋಚನೆ ನಡೆಸಿದ ಬಳಿಕ 18ರಿಂದ 20 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿ ಸುರ್ಜೇವಾಲ ಅವರೊಂದಿಗೆ ಚರ್ಚೆ ಮಾಡಿ ಹೈಕಮಾಂಡ್ ಮುಂದೆ ರಾಜ್ಯದ ಆಕಾಂಕ್ಷಿಗಳ ಪಟ್ಟಿಯನ್ನು ಮಂಡಿಸಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಈಗಾಗಲೇ ಪ್ರಮುಖ 195 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇನ್ನು ಕಾಂಗ್ರೆಸ್ ಬಿಡುಗಡೆಗೊಳಿಸುವ ಮೊದಲನೇ ಪಟ್ಟಿಯು ಎಲ್ಲರ ನಿರೀಕ್ಷೆ ಹೆಚ್ಚಿಸಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇಂದು ಮತ್ತು ನಾಳೆ ಮಹತ್ವದ ಸಭೆ ನಡೆಸಲಿದೆ. ಇನ್ನು ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ.