ನವದೆಹಲಿ, ಮಾ 05(DaijiworlNews/AK): ಯುಪಿಎಸ್ ಸಿ ಪರೀಕ್ಷೆನಲ್ಲಿ ಯಶಸ್ವಿಯಾಗಲು ಕೆಲವರಿಗೆ ಅನೇಕ ವರ್ಷಗಳೇ ಬೇಕಾಗುತ್ತದೆ. ಆದರೆ ಕೇವಲ 22 ವರ್ಷದ ಯುವತಿ ಒಂದೇ ವರ್ಷ ಪರೀಕ್ಷೆಗೆ ತಯಾರಿ ನಡೆಸಿ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಐಎಎಸ್ ಅನನ್ಯಾ ಸಿಂಗ್ 10 ಮತ್ತು 12ನೇ ಬೋರ್ಡ್ ಪರೀಕ್ಷೆಯಲ್ಲಿ ಜಿಲ್ಲಾ ಟಾಪರ್ ಆಗಿದ್ದ ಅನನ್ಯಾ ಸಿಂಗ್ ಕೇವಲ 22ನೇ ವಯಸ್ಸಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.ಅನನ್ಯಾ ಸಿಂಗ್ ಯಾವುದೇ ಕೋಚಿಂಗ್ ಸಹಾಯವನ್ನೂ ತೆಗೆದುಕೊಳ್ಳದೆ, ಕೇವಲ ಒಂದು ವರ್ಷದ ತಯಾರಿಯಲ್ಲಿ ಯುಪಿಎಸ್ ಸಿ ಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಿದ್ದಾರೆ. UPSC CSE 2019 ಪರೀಕ್ಷೆಯಲ್ಲಿ 51ನೇ ರ್ಯಾಂಕ್ ಗಳಿಸಿದ್ದಾರೆ. ಈ ಮೂಲಕ ಐಎಎಸ್ ಅನನ್ಯಾ ಸಿಂಗ್ ತಮ್ಮ ವಿಶೇಷ ಸಾಧನೆ ಮೂಲಕ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಭರವಸೆ ಮೂಡಿಸಿದ್ದಾರೆ.
ಐಎಎಸ್ ಅನನ್ಯಾ ಮೂಲತಃ ಪ್ರಯಾಗರಾಜ್ ನಿವಾಸಿ. ಬಾಲ್ಯದಿಂದಲೂ ಈಕೆ ಟಾಪರ್. ಪ್ರಯಾಗರಾಜ್ ನಲ್ಲಿರುವ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ತನ್ನ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದರು. 10 ನೇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 96 ಅಂಕಗಳನ್ನು ಪಡೆದಿದ್ದರೆ, 12 ನೇ ತರಗತಿಯಲ್ಲಿ ಶೇಕಡಾ 98.25 ಮಾರ್ಕ್ಸ್ ಗಳಿಸಿದ್ದರು. ಅನನ್ಯಾ ಸಿಐಎಸ್ ಸಿಇ ಮಂಡಳಿಯಿಂದ 10 ಮತ್ತು 12ನೇ ಎರಡರಲ್ಲೂ ಜಿಲ್ಲಾ ಟಾಪರ್ ಆಗಿದ್ದಾರೆ.
ಬಳಿಕ ಅನನ್ಯಾ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಅರ್ಥಶಾಸ್ತ್ರ ಗೌರವಗಳಲ್ಲಿ ಪದವಿ ಪಡೆದರು. ಸಿಂಗ್ಗೆ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂದು ಬಯಕೆ ಇತ್ತು.. ಪದವಿಯ ಕೊನೆಯ ವರ್ಷದಿಂದ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಪ್ರತಿದಿನ 7-8 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಆರಂಭದಲ್ಲಿ, ಅವರು UPSC ಪೂರ್ವ ಮತ್ತು ಮುಖ್ಯ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸಿದರು. ಐಎಎಸ್ ಅನನ್ಯಾ ಸಿಂಗ್ ಒಂದು ವರ್ಷ ಶ್ರಮಿಸಿದರು.UPSC CSE 2019 ಪರೀಕ್ಷೆಯ ಫಲಿತಾಂಶವನ್ನು ನೋಡಿದಾಗ 51ನೇ ರ್ಯಾಂಕ್ ಗಳಿಸಿರುವುದನ್ನು ಸ್ವತಃ ಅವರೇ ನಂಬಲಾಗಲಿಲ್ಲ. ಕೇವಲ 22ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗುವ ಮೂಲಕ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಈಗ ಐಎಎಸ್ ಅನನ್ಯಾ ಸಿಂಗ್ ಪ್ರಸ್ತುತ ಪಶ್ಚಿಮ ಬಂಗಾಳ ಕೇಡರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಅನನ್ಯಾ ನಿಜಕ್ಕೂ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.