ಬೆಂಗಳೂರು, ಮಾ 05(DaijiworlNews/AK):ರಾಜ್ಯದಲ್ಲಿ ಮುಂದಿನ ಮೂರು ತಿಂಗಳಲ್ಲಿ ಎದುರಾಗಬಹುದಾದ ತೀವ್ರ ಬರಗಾಲವನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಸಿಇಓ ಗಳೊಂದಿಗೆ ವೀಡಿಯೊ ಸಂವಾದ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅನಿವಾರ್ಯವಾದಾಗ ಮಾತ್ರ ಹೊಸ ಕೊಳವೆಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಹೆಚ್ಚುವರಿಯಾಗಿ 140 ಕೋಟಿ ರೂ.ಗಳ ಜೊತೆಗೆ 70 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು.ಇದು ಸರ್ಕಾರದಿಂದ ನೀಡುವ ಅನುದಾನವಾಗಿದೆ ಎಂದರು.
ಕರ್ನಾಟಕದಲ್ಲಿ ಈ ವರ್ಷ ಬರಗಾಲವಿದ್ದು, 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದು, 194 ತೀವ್ರ ಬರಗಾಲ ಪೀಡಿತವಾಗಿವೆ.ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂದು ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂ. ಲಭ್ಯವಿದೆ.ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ಕರೆದು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಈವರೆಗೆ 646 ಸಭೆಗಳನ್ನು ಇಲ್ಲಿಯವರೆಗೆ ನಡೆಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಿದೆ ಎಂದರು.
ಸಮಸ್ಯೆಯಿರುವ ಗ್ರಾಮ, ಜಿಲ್ಲೆಗಳಲ್ಲಿ ಅದಕ್ಕೆ ಮುಂಚಿತವಾಗಿ ಯೋಜನೆ ತಯಾರಿಸಬೇಕು. ಸದ್ಯ 98 ತಾಲ್ಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 204 ಟ್ಯಾಂಕರ್ ಗಳಿಂದ 596 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದು ವಿವರಿಸಿದರು.
120 ಬಿಬಿಎಂಪಿ ಹಾಗೂ ಜಲಮಂಡಲಿಯಲ್ಲಿ 232 ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಆಗುತ್ತಿದೆ. 96 ವಾರ್ಡುಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದೆ ಎಂದರು.