ನವದೆಹಲಿ, ಮಾ 04(DaijiworldNews/AA): ಸನಾತನ ಧರ್ಮವನ್ನು ಕಟುವಾಗಿ ನಿಂದಿಸಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ಪದಪ್ರಯೋಗದಲ್ಲಿ ಎಚ್ಚರಿಕೆ ವಹಿಸಬೇಕಿತ್ತು. ಸೂಕ್ಷ್ಮ ವಿಚಾರಗಳಲ್ಲಿ ಯಾವ ರೀತಿ ಮಾತನಾಡಬೇಕು ಎಂಬ ಜವಾಬ್ದಾರಿ ಸಚಿವರಾದವರಿಗೆ ಇರಬೇಕು ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಸನಾತನ ಧರ್ಮ ಅಳಿಸಬೇಕು ಎಂದು ಹೇಳಿಕೆ ನೀಡಿದ್ದ ಸಚಿವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಉತ್ತರಪ್ರದೇಶ, ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಉದಯನಿಧಿ ಮೇಲೆ ಎಫ್ಐಆರ್ಗಳು ದಾಖಲಾಗಿವೆ. ಅವೆಲ್ಲವನ್ನೂ ಒಂದು ಸೇರಿಸಬೇಕು ಎಂದು ಸ್ಟಾಲಿನ್ ಅವರು ಮನವಿ ಮಾಡಿಕೊಂಡಿದ್ದರು. ಇದರ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸುತ್ತಿದೆ. ಇನ್ನು ಮುಂದಿನ ವಿಚಾರಣೆಯು ಮಾರ್ಚ್ 15ಕ್ಕೆ ನಡೆಯಲಿದೆ.
ಸ್ಟಾಲಿನ್ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಬಂಧ ಜಾಮೀನು ನೀಡುವಂತೆ ಉದಯನಿಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಸಿಂಘ್ವಿ ಅವರು 6 ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಆರು ಹೈಕೋರ್ಟ್ಗಳಿಗೆ ಉದಯನಿಧಿ ಅವರು ಹೋಗಬೇಕಾಗುತ್ತದೆ. ಆದ್ದರಿಂದ ಈ ಎಲ್ಲಾ ಎಫ್ಐಆರ್ಗಳನ್ನು ಒಟ್ಟುಗೂಡಿಸಬೇಕು ಎಂದು ಕೇಳಿಕೊಂಡರು. ಇದಕ್ಕೆ ಸಂಜೀವ್ ಖನ್ನ ಮತ್ತು ದೀಪಾಂಕರ್ ದತ್ತ ಅವರಿರುವ ಸರ್ವೋಚ್ಚ ನ್ಯಾಯಪೀಠವು, ಹೇಳಿಕೆ ನೀಡುವ ಮುನ್ನ ಯೋಚನೆ ಮಾಡಬೇಕಿತ್ತು ಹಾಗೂ ಸಂಬಂಧಪಟ್ಟ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸ್ಟಾಲಿನ್ ಪರ ವಕೀಲರಿಗೆ ತಿಳಿಸಿದೆ.