ಬೆಂಗಳೂರು, ಮಾ 04(DaijiworldNews/AA): ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನಿಟ್ಟುಕೊಂಡು ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಇದು ದೇಶದ್ರೋಹದ ಕೆಲಸ ಎಂದು ಬಿಜೆಪಿ ಪಕ್ಷದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕುರಿತು ನೀಡಿದ ಖಾಸಗಿ ಫೋರೆನ್ಸಿಕ್ ವರದಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಫೋರೆನ್ಸಿಕ್ ವರದಿ(ಎಫ್ ಎಸ್ ಎಲ್) ತರಿಸಿ ಬಹಿರಂಗ ಪಡಿಸಿದ ಬಿಜೆಪಿಯ ನಡೆ ದೇಶದ್ರೋಹದ ಕೆಲಸ. ಇದು ಸಾಮಾನ್ಯವಾದ ಪ್ರಕರಣವಲ್ಲ. ದೇಶದ್ರೋಹದ ಘೋಷಣೆ ಕೂಗಿದ್ದಾರೆಂದು ಹೇಳ್ತಾ ಇದ್ದಾರೆ. ಅದಕ್ಕೆ ಸರ್ಕಾರವೇ ಉತ್ತರಿಸಬೇಕು. ಬಿಜೆಪಿಯವರು ಖಾಸಗಿ ಸಂಸ್ಥೆಗಳ ಬಳಿ ಹೋಗಿ ಅದನ್ನು ಬಹಿರಂಗ ಪಡಿಸುತ್ತಿರುವುದು ನಿಜಕ್ಕೂ ದೇಶದ್ರೋಹದ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.
ವರದಿ ತರಿಸಿರುವ ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಎಂಬ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಖಾಸಗಿಯಾಗಿ ಇವರು ಏನಾದರೂ ಮಾಡಿಕೊಳ್ಳಲಿ. ವರದಿ ನೀಡಿದ ಸಂಸ್ಥೆಗೆ ಸರ್ಕಾರದ ಪ್ರಮಾಣೀಕೃತ ಇದೆಯೇ, ತರಬೇತಿ ಇದೆಯೇ ಎಂದು ನನಗೆ ತಿಳಿದಿಲ್ಲ. ಒಂದು ವೇಳೆ ಇದ್ದರೂ ಆ ಲ್ಯಾಬ್ ಈ ಬಗ್ಗೆ ಸ್ಥಳೀಯ ಪೊಲೀಸರ ಹಾಗೂ ಸರ್ಕಾರದ ಗಮನಕ್ಕೆ ತಂದು ವರದಿ ಸಲ್ಲಿಸಬೇಕಿತ್ತು. ಅಷ್ಟು ಪ್ರಬುದ್ಧತೆ ಸಂಸ್ಥೆಗೆ ಇರಬೇಕಿತ್ತು. ಬಿಜೆಪಿಯವರು ಆ ಸಂಸ್ಥೆಗೆ ನೀಡಿರುವ ಫೂಟೇಜ್ ಯಾವುದು? ಇನ್ನು ಇಂಟರ್ನೆಟ್ನಲ್ಲಿ ವೀಡಿಯೋ ಕ್ವಾಲಿಟಿ ಕಡಿಮೆ ಆಗುತ್ತದೆ. ಒಂದು ವೇಳೆ ಬಿಜೆಪಿಯವರು ರಾ ಫೂಟೇಜ್ ಕೊಟ್ಟಿದ್ರೆ ಅವರಿಗೆ ಎಲ್ಲಿಂದ ಸಿಕ್ಕಿತು? ಎಂದು ಅವರು ಪ್ರಶ್ನಿಸಿದ್ದಾರೆ.