ತೀರ್ಥಹಳ್ಳಿ, ಮಾ 04(DaijiworldNews/AA): ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ಇಂದು ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಪೊಲೀಸರು ಹಾಜರು ಪಡಿಸಿದ್ದು, ಬಳಿಕ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ನಕ್ಸಲ್ ಹೋರಾಟದ ಪ್ರಕರಣಗಳ ತನಿಖೆಯನ್ನು ಶಿವಮೊಗ್ಗದಲ್ಲಿ ಚುರುಕುಗೊಳಿಸಲಾಗಿದೆ. ನಕ್ಸಲ್ ಹೋರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಿರುವ ಪೊಲೀಸರು, ಶ್ರೀಮತಿಯನ್ನು ಹೈ ಸೆಕ್ಯೂರಿಟಿ ಮೂಲಕ ಕೇರಳದ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಶಿವಮೊಗ್ಗಕ್ಕೆ ಕರೆತಂದಿದ್ದಾರೆ.
ಕಳೆದ ತಿಂಗಳು ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದೀಗ ಈ ಬೆನ್ನಲ್ಲೇ ನಕ್ಸಲ್ ಹೋರಾಟಗಾರ್ತಿ ಶ್ರೀಮತಿಯನ್ನು ತೀರ್ಥಹಳ್ಳಿ ಪೊಲೀಸರ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ ಕಸ್ಟಡಿಗೆ ಪಡೆದಿದ್ದಾರೆ. ಇನ್ನು ಶ್ರೀಮತಿಯು ಆಗುಂಬೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಆರೋಪಿಯಾಗಿದ್ದು, ಆಕೆಯನ್ನು ತನಿಖೆಗೆ ಒಳಪಡಿಸುವ ಉದ್ದೇಶದಿಂದ ಕಸ್ಟಡಿಗೆ ಪಡೆಯಲಾಗಿದೆ.
ಮೂಲತಃ ಚಿಕ್ಕಮಗಳೂರು ಶೃಂಗೇರಿ ಸಮೀಪದ ತಾರಳ್ಳಿಕೊಡಿಗೆ ಗ್ರಾಮದವರಾದ ಶ್ರೀಮತಿಯು ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯೊಂದಿಗೆ ತನ್ನನ್ನು ಗುರುತಿಸಿಕೊಂಡಿದ್ದಾರೆ. ಶ್ರೀಮತಿಯನ್ನು ಕೇರಳ ಪೊಲೀಸರು 2023ರ ನವೆಂಬರ್ 7 ರಂದು ಬಂಧಿಸಿದ್ದು, ವಿಚಾರಣೆ ನಂತರ ಆಕೆಯನ್ನು ತ್ರಿಶೂರ್ ಜೈಲಿನಲ್ಲಿ ಇರಿಸಲಾಗಿತ್ತು.