ಹರಿಯಾಣ, ಮಾ 03(DaijiworldNews/AA): ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಬೇಕು ಎಂದರೆ ಹಲವಾರು ಅಡೆತಡೆಗಳು ಎದುರಾಗುತ್ತದೆ. ಆ ಎಲ್ಲಾ ಅಡೆತಡೆಗಳನ್ನು ದಾಟಿ ಗುರಿಯನ್ನು ತಲುಪುವ ಛಲ ನಮ್ಮಲ್ಲಿ ಇರಬೇಕು. ಹೀಗೆ ತನ್ನ ಜೀವನದಲ್ಲಿ ಎದುರಾದ ಸಾಕಷ್ಟು ಅಡೆತಡೆಗನ್ನು ದಿಟ್ಟತನದಿಂದ ಮೆಟ್ಟಿ ನಿಂತು ಯುಪಿಎಸ್ಸಿ ಪರೀಕ್ಷೆ ಬರೆದು ಐಎಎಸ್ ಅಧಿಯಾರಿಯಾದ ಪ್ರೀತಿ ಬೆನಿವಾಲ್ ಅವರ ಯಶೋಗಾಥೆ ಇದು.
ಪ್ರೀತಿ ಅವರು ಮೂಲತಃ ಹರಿಯಾಣದ ದುಪೇಡಿಯವರು. ಅವರ ತಂದೆ ಪಾಣಿಪತ್ ನ ಥರ್ಮಲ್ ಪ್ಲಾಂಟ್ನಲ್ಲಿ ಉದ್ಯೋಗ ಮಾಡುತ್ತಿದ್ದರು. ತಾಯಿ ಬಬಿತಾ ಹತ್ತಿರದ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರೀತಿ ಅವರು ಫಫ್ಡಾನಾ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.. 10 ನೇ ತರಗತಿಯನ್ನು ಪಾಣಿಪತ್ ನಲ್ಲಿ ಪೂರ್ಣಗೊಳಿಸಿದ ಅವರು, ಟಾಪರ್ ಆಗಿ ಹೊರ ಹೊಮ್ಮುತ್ತಾರೆ. ಆ ಬಳಿಕ ಮಟ್ಲುಡಾದಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸುತ್ತಾರೆ. ನಂತರ ಹರಿಯಾಣದ ಇಸ್ರಾನಾ ಕಾಲೇಜಿನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಪಡೆಯುತ್ತಾರೆ.
ಪ್ರೀತಿ ತನ್ನ ಎಂಟೆಕ್ ಪದವಿ ಮುಗಿಸಿದ ಬಳಿಕ 2013 ರಿಂದ 2016 ರವರೆಗೆ ಗ್ರಾಮೀಣ ಬ್ಯಾಂಕಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಾರೆ. ನಂತರ, ಅವರು 2016 ರಿಂದ 2021ರ ಜನವರಿ ವರೆಗೆ ಕರ್ನಾಲ್ನಲ್ಲಿ ಎಫ್ಸಿಐ ಅಸಿಸ್ಟೆಂಟ್ ಜನರಲ್ II ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಆ ಬಳಿಕ 2021ರ ಜನವರಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಆಯ್ಕೆಯಾದ ಅವರು, ದೆಹಲಿಯ ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.
ಈ ಮಧ್ಯೆ 2016 ರಲ್ಲಿ, ಪ್ರೀತಿ ಅವರು ಫುಡ್ ಕೋ-ಆಪರೇಶನ್ ಆಫ್ ಇಂಡಿಯಾದಲ್ಲಿ ತಮ್ಮ ಉದ್ಯೋಗದಲ್ಲಿ ಬಡ್ತಿಗಾಗಿ ಗಾಜಿಯಾಬಾದ್ ನಲ್ಲಿ ಪರೀಕ್ಷೆಗೆ ಹಾಜರಾಗುವವರಿದ್ದರು. ಅದಕ್ಕಾಗಿ ರೈಲು ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ, ಅವರು ಪ್ಲಾಟ್ ಫಾರ್ಮ್ ಮೇಲಿಂದ ಜಾರಿ ರೈಲು ಹಳಿಗಳ ಮೇಲೆ ಬೀಳುತ್ತಾರೆ. ಈ ವೇಳೆ ಅವರ ಮೇಲೆ ರೈಲಿನ ಕೆಲ ಬೋಗಿಗಳು ಹಾದು ಹೋಗಿ ಗಂಭೀರವಾಗಿ ಗಾಯಗೊಳ್ಳುತ್ತಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿ ಅವರು 14 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಇನ್ನು ಈ ಘಟನೆಯಿಂದಾಗಿ ಪ್ರೀತಿ ಅವರ ಪತಿ, ಅತ್ತೆ ಮಾವ ಅವರನ್ನು ದೂರ ಮಾಡುತ್ತಾರೆ. ಆದರೆ ಈ ಎಲ್ಲಾ ಕಹಿ ಘಟನೆಗಳಿಂದ ಕುಗ್ಗದೇ ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಳ್ಳಲು ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಾರೆ. ಯಾವುದೇ ತರಬೇತಿ ಪಡೆಯದೇ 2020 ರಲ್ಲಿ 754ನೇ ಶ್ರೇಣಿಯೊಂದಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.