ಬೆಂಗಳೂರು, ಮಾ 01 (DaijiworldNews/MS): ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟವಾಗಿದ್ದು, ಘಟನೆಯಲ್ಲಿಐವರಿಗೆ ಗಂಭೀರ ಗಾಯಗಳಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಜನ ಭಯಭೀತರಾಗಿ ಓಡಾಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೊದಲಿಗೆ ಹೊಟೇಲ್ ನಲ್ಲಿ ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಆಗಿರಬಹುದೆಂದು ಶಂಕಿಸಲಾಗಿತ್ತಾದರೂ, ಬ್ಲಾಸ್ಟ್ ನಡೆದ ಸ್ಥಳದ ಸಮೀಪದಲ್ಲೇ ಒಂದು ಬ್ಯಾಟರಿ ಐಡಿ ಕಾರ್ಡ್ , ಬ್ಯಾಗ್ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದು, ಸ್ಫೋಟದ ಹಿಂದೆ ದುಷ್ಕರ್ಮಿ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ FSL ತಂಡ ಪರಿಶೀಲನೆ ನಡೆಸಿದೆ. ಆದರೆ ಈ ವೇಳೆ ಹೋಟೆಲ್ನಲ್ಲಿದ್ದ ಯಾವುದೇ ವಸ್ತು ಸ್ಫೋಟ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.