ಬೆಂಗಳೂರು, ಮಾ 01 (DaijiworldNews/MS): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಇಂದು ಆರಂಭವಾಗುತ್ತಿದೆ. ಈ ಬಾರಿ 1,124 ಕೇಂದ್ರಗಳಲ್ಲಿ ಈ ಬಾರಿ 6,98,624 ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ.
ಇಂದಿನಿಂದ ಮಾ.22 ರವರೆಗೆ ನಿತ್ಯ ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (1,2,3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕವಿಲ್ಲದೇ ಪರೀಕ್ಷೆ ಎದುರಿಸಬಹುದು. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದೇ ಇದ್ದರೆ ಮತ್ತೆ ಏಪ್ರಿಲ್ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3ಯನ್ನು ಎದುರಿಸುವ ಅವಕಾಶವಿದೆ.