ಬೆಂಗಳೂರು, ಫೆ 29(DaijiworldNews/MS): ಮಾಸಲು ಬಟ್ಟೆ ಧರಿಸಿದ್ದ ರೈತರೊಬ್ಬರಿಗೆ ಮೆಟ್ರೋ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅವಮಾನ ವಿವಾದ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶ ಮಾಡಿದೆ. ವ್ಯಕ್ತಿಯ ಬಟ್ಟೆಯ ಆಧಾರದ ಮೇಲೆ ಸಾರ್ವಜನಿಕ ಸಾರಿಗೆಯಲ್ಲಿ ಅವಕಾಶ ನಿರಾಕರಣೆ ಮಾಡುವಂತಿಲ್ಲ. ಆ ರೀತಿಯಾದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ.ಈ ಬಗ್ಗೆ ವರದಿ ನೀಡುವಂತೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕು ವಾರದಲ್ಲಿ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದೆ.
ಫೆ.26 ರಂದು ರಾಜಾಜಿನಗರ ಮೆಟ್ರೋ ರೈಲು ನಿಲ್ದಾಣದಲ್ಲಿ ಸಿಬ್ಬಂದಿ ದುರಹಂಕಾರದ ವರ್ತನೆ ಮೆರೆದಿದ್ದರು. ಇದನ್ನು ಸಹ ಪ್ರಯಾಣಿಕ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಅಷ್ಟೇ ಅಲ್ಲ, ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಜೊತೆಗೆ ಸಹ ಪ್ರಯಾಣಿಕರೆಲ್ಲರೂ ಸೇರಿ ಸಿಬ್ಬಂದಿಗೆ ಲೆಕ್ಕಿಸದೇ ರೈತರನ್ನು ಕರೆದುಕೊಂಡು ಹೋಗಿದ್ದರು. ನಂತರ ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋವನ್ನು ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಎಂದು ಪ್ರಶ್ನಿಸಿ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದರು. ‘ರೈತ ಬೆಳೆ ಬೆಳೆದಿಲ್ಲ ಅಂದರೆ ನೀವು ಏನು ತಿಂತೀರಾ ಎಂದು ಜನರು ಪ್ರಶ್ನಿಸಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತ ಬಿಎಂಆರ್ಸಿಎಲ್, ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿತ್ತು.