ಬೆಂಗಳೂರು, ಫೆ 28 (DaijiworldNews/HR): ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಮತ್ತು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರಕಾರಗಳು ಎಸ್.ಸಿ.- ಎಸ್.ಟಿ. ಸಮುದಾಯಗಳ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಶಿಕಾರಿಪುರದಲ್ಲಿ ಇಂದು ನಡೆದ ಎಸ್.ಸಿ.-ಎಸ್.ಟಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಜೀ ಅವರು ಪ್ರಧಾನಿಯಾದ ಬಳಿಕ ದೇಶವು ಸರ್ವಾಂಗೀಣ ಅಭಿವೃದ್ಧಿ ಆಗಿದೆ. 2047ನೇ ಇಸವಿಗೆ ಭಾರತ ಒಂದು ಸಮೃದ್ಧ ರಾಷ್ಟ್ರವಾಗಬೇಕು; ಕಟ್ಟಕಡೆಯ ವ್ಯಕ್ತಿಗೂ ಕೂಡ ಅಭಿವೃದ್ಧಿಯ ಪ್ರಯೋಜನ ತಲುಪಬೇಕು ಎಂಬ ನಿಟ್ಟಿನಲ್ಲಿ ಮೋದಿಜೀ ಅವರು ಶ್ರಮಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರವು ಕಳೆದ 9 ತಿಂಗಳಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಬಡವರು, ದೀನದಲಿತರ ಬಗ್ಗೆ ಯಾವುದೇ ಯೋಜನೆ ಹಾಕಿಕೊಳ್ಳದ ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಕುರಿತು ಜನರು ಬೇಸತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಎಲ್ಲ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ- ಜೆಡಿಎಸ್ ಗೆಲ್ಲುವಂಥ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ತಾಂಡಾಗಳ ಅಭಿವೃದ್ಧಿಗೆ ಆದ್ಯತೆ ಕೊಟ್ಟವರು ಯಡಿಯೂರಪ್ಪ ಅವರು ಎಂದು ವಿವರಿಸಿದರು. ಮಾದಾರ ಚೆನ್ನಯ್ಯ ಪೀಠಕ್ಕೆ ಅನುದಾನ, ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದವರು ಆಗಿನ ಸಿಎಂ ಯಡಿಯೂರಪ್ಪ ಅವರು ಎಂದು ವಿವರಿಸಿದರು. ವಿಪಕ್ಷದವರೂ ಕೊಂಡಾಡುವ ಮಾದರಿಯಲ್ಲಿ ಬಿ.ವೈ.ರಾಘವೇಂದ್ರ ಅವರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಂಥ ಸಂಸದರನ್ನು ನಾಲ್ಕನೇ ಬಾರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 3.5 ಲಕ್ಷದಿಂದ 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಶಿಕಾರಿಪುರ ಕ್ಷೇತ್ರದಲ್ಲಿ ಇತರ ಎಲ್ಲ ಕ್ಷೇತ್ರಗಳಿಗಿಂತ ಹೆಚ್ಚು ಲೀಡ್ ತಂದು ಕೊಡಿ ಎಂದು ವಿನಂತಿಸಿದರು.
ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಎಸ್.ಸಿ- ಎಸ್.ಟಿ ಸಮುದಾಯಗಳಿಗೆ ಆರ್ಥಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಶಕ್ತಿ ಕೊಡುವ ಪ್ರಾಮಾಣಿಕ ಪ್ರಯತ್ನ ಏನಾದರೂ ನಡೆದಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಜೀ ಅವರ ಹಾಗೂ ರಾಜ್ಯದಲ್ಲಿ ಬಸವ ತತ್ವ ಅನುಸರಿಸಿ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದ ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಮಾತ್ರ ಎಂದು ಅವರು ನುಡಿದರು.
ಸ್ವಾತಂತ್ರ್ಯ ಬಂದು 60-65 ವರ್ಷಗಳ ಕಾಲ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದಿದೆ. ಕೇವಲ ಚುನಾವಣೆ ಬಂದ ಸಂದರ್ಭದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರನ್ನು ಹೇಳುವ ಕಾಂಗ್ರೆಸ್ ಪಕ್ಷವು, ದೇಶ- ರಾಜ್ಯದಲ್ಲಿ ತುಳಿತಕ್ಕೆ ಒಳಗಾದ ಸಮಾಜಗಳಿಗೆ ಯಾವುದೇ ರೀತಿಯ ನ್ಯಾಯ ಕೊಡುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಸ್ವಾಭಿಮಾನಿ ಬದುಕು ಕಟ್ಟಿಕೊಡಬೇಕೆನ್ನುವ ನಿಟ್ಟಿನಲ್ಲಿ ‘ವಿಶ್ವಕರ್ಮ' ಯೋಜನೆಯಂತಹ ಮಹತ್ವದ ಯೋಜನೆಯನ್ನು ಜಾರಿಗೆ ತರುವ ಮೂಲಕ "ನಮ್ಮದು ವರ್ಷದ ಕೂಳನ್ನು ಕೊಟ್ಟು ಬದುಕು ಕಟ್ಟಿಕೊಡುವ ಸರ್ಕಾರ" ಎಂದು ತೋರಿಸಿಕೊಟ್ಟವರು ನಮ್ಮ ನರೇಂದ್ರ ಮೋದಿಯವರು. ಆದ್ದರಿಂದ ಅವರನ್ನು ಮಗದೊಮ್ಮೆ ಪ್ರಧಾನಿ ಮಾಡುವ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್, ಮಾಜಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಉಪ ನಾಯಕ ಸುನೀಲ್ ವಲ್ಯಾಪುರೆ, ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾ ನಾಯಕ್, ಮಾಜಿ ಶಾಸಕ ಅಶೋಕ್ ನಾಯಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೇರಿ, ತಮ್ಮೇಶ್ ಗೌಡ, ಸ್ಥಳೀಯ ಮುಖಂಡರಾದ ಗುರುಮೂರ್ತಿ, ಎಚ್.ಟಿ.ಬಳಿಗಾರ್, ರಾಮಾ ನಾಯಕ್, ಎಸ್.ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷರು, ಎಸ್.ಸಿ-ಎಸ್.ಟಿ ಮೋರ್ಚಾಗಳ ಅಧ್ಯಕ್ಷರು, ಶಕ್ತಿ ಕೇಂದ್ರ ಹಾಗೂ ಮಹಾ ಶಕ್ತಿಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.