ಲಕ್ನೋ, ಫೆ 28(DaijiworldNews/AA): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಕೇಂದ್ರ ತನಿಖಾ ದಳ(ಸಿಬಿಐ) ಇಂದು ಸಮನ್ಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದಲ್ಲಿ 5 ವರ್ಷಗಳ ಹಿಂದಿನ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಆರ್ಪಿಸಿ ಸೆಕ್ಷನ್ 160 ರ ಅಡಿಯಲ್ಲಿ ಸಿಬಿಐ ಸಮನ್ಸ್ ನೀಡಿದೆ. ಹಾಗೂ ಫೆಬ್ರವರಿ 29 ರಂದು ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅಖಿಲೇಖ್ ಅವರಿಗೆ ಸೂಚಿಸಿದೆ.
ಇನ್ನು ಅಖಿಲೇಶ್ ಅವರು 2012 ರಿಂದ 2016ರವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಗಣಿಗಾರಿಕೆಗೆ ಪರವಾನಿಗೆ ನೀಡಿದ್ದರು. ಇದರಿಂದ ಅಧಿಕಾರಿಗಳು ಖನಿಜಗಳ ಕಳ್ಳತನಕ್ಕೆ ಅವಕಾಶ ನೀಡಿದ್ದಾರೆ. ಹಾಗೂ ಅವರು ಗುತ್ತಿಗೆದಾರರು ಮತ್ತು ಚಾಲಕರಿಂದ ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಲಾಗಿದೆ.