ಶಿವಮೊಗ್ಗ, ಫೆ 28(DaijiworldNews/AA): ದೇಶದ್ರೋಹಿಗಳನ್ನು ರಕ್ಷಿಸುವ 6ನೇ ಗ್ಯಾರಂಟಿಯನ್ನು ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ವಿಚಾರವಾಗಿ ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆಯೇ ಆತನನ್ನು ಬಂಧಿಸಬೇಕಿತ್ತು. ದೇಶದ್ರೋಹಿಗಳನ್ನು ಬಂಧಿಸಲು ಇಷ್ಟೊಂದು ಯೋಚಿಸಬೇಕಾ? ಘೋಷಣೆ ಕೂಗಿದ ಜಾಗದಲ್ಲೇ ಆತನನ್ನು ಒದ್ದು ಬಂಧಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಮಂಗಳೂರಿನಲ್ಲಿ ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ನಟ ಪ್ರಕಾಶ್ ರೈ ಅಯೋಗ್ಯ ಎಂದು ಹೇಳಿದ್ದಾರೆ. ಅಯೋಗ್ಯರ ಮಾತಿಗೆ ಉತ್ತರಿಸಬೇಕಿಲ್ಲ. ಮೋದಿ ಅವರನ್ನು ದೇಶದ ಜನತೆ ಒಪ್ಪಿಕೊಂಡಿದೆ. ಖರ್ಗೆ ಅವರೇ 400 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂದು ಹೇಳಿದ್ದಾರೆ ಎಂದು ತಿಳಿಸಿದರು.