ಬೆಂಗಳೂರು, ಫೆ 27(DaijiworldNews/AK):ವಿಪ್ ಜಾರಿ ಮಾಡಿದ ನಂತರ ಪಕ್ಷಕ್ಕೆ ದ್ರೋಹ ಬಗೆದ ಸಂಬಂಧ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಚರ್ಚೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಮತ್ತು ವಕೀಲ ವಿವೇಕ್ ರೆಡ್ಡಿ ಅವರು ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಕ್ರಮ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು. ಮತದಾರರು, ಪಕ್ಷಕ್ಕೆ ದ್ರೋಹ ಬಗೆದಿರುವುದು ಮತ್ತು ಜನರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡದ್ದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಘೋರವಾದ ಅಪರಾಧ ಎಂದು ವಿವರಿಸಿದರು.
ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ. ವಿಪ್ ಜಾರಿಯ ಬಳಿಕ ಯಾವ ಜನಪ್ರತಿನಿಧಿಯೂ ಅದರ ವಿರುದ್ಧ ಮತದಾನ ಮಾಡಲು ಅಥವಾ ಅಡ್ಡ ಮತದಾನಕ್ಕೆ ಅವಕಾಶವಿಲ್ಲ. ವಿಪ್ ಉಲ್ಲಂಘನೆ ಆಗಿದೆ. ಆದ್ದರಿಂದ ಕೂಡಲೇ ಅವರ ಸದಸ್ಯತ್ವ ಅಮಾನತಾಗಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಸ್ಪೀಕರ್ ವಿಳಂಬ ಮಾಡಿದರೆ ಅದರ ವಿರುದ್ಧ ಹೈಕೋರ್ಟ್, ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.