ನವದೆಹಲಿ, ಫೆ 26(DaijiworldNews/AA): ಆಧಾರ್ ಕಾರ್ಡ್ ಹೊಂದಿರದೇ ಇರುವವರನ್ನು ಮತದಾನ ಮಾಡದಂತೆ ತಡೆಯುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷಕ್ಕೆ ಭರವಸೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಹಲವರ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಹಿನ್ನೆಲೆ ಟಿಎಂಸಿ ಪಕ್ಷದ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರೇ, ಡೋಲಾ ಸೇನ್, ಸಾಕೆತ್ ಗೋಖಲೆ ಹಾಗೂ ಲೋಕಸಭಾ ಸಂಸದರಾದ ಪ್ರತಿಮಾ ಮಂಡೊಲ್ ಹಾಗೂ ಸಾಜ್ದಾ ಅಹಮದ್ ಅವರನ್ನು ಒಳಗೊಂಡಿದ್ದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿತ್ತು.
ಈ ಭೇಟಿ ವೇಳೆ ಚುನಾವಣಾ ಆಯೋಗವು ಮತದಾರರು ತಮ್ಮ ಗುರುತಿನ ಚೀಟಿ ಅಥವಾ ಇನ್ನಿತರೆ ಯಾವುದೇ ನಿರ್ದಿಷ್ಟ ಗುರುತಿನ ದಾಖಲೆ ತೋರಿಸಿ ಮತದಾನ ಮಾಡಬಹುದು ಎಂದು ನಿಯೋಗಕ್ಕೆ ತಿಳಿಸಿದೆ.