ನವದೆಹಲಿ,ಫೆ 26(DajiworldNews/SK): ಇಂದು ಪ್ರಧಾನಿ ನರೇಂದ್ರ ಮೋದಿ ಅವರು 41,000 ಸಾವಿರ ಕೋಟಿ ರೂಪಾಯಿ ವೆಚ್ಚದ 554 ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ದಿಗಾಗಿ ಶಂಕುಸ್ಥಾಪನೆ ನೆರವೇರಿಸಿದರು.
ದೇಶದ ರೈಲ್ವೆ ಮೂಲಭೂತ ಸೌಕರ್ಯದ ಅಭಿವೃದ್ಧಿಯ ಮುಖ್ಯ ಉದ್ದೇಶ ಈ ಯೋಜನೆಯದು. ಇಂದು ನಮ್ಮ ರೈಲ್ವೆಯ ಐತಿಹಾಸಿಕ ದಿನವಾಗಿದೆ. ಸುಮಾರು 2,000 ರೈಲ್ವೆ ಮೂಲಭೂತ ಸೌಕರ್ಯದ ಯೋಜನೆಗಳಿಗೆ ಚಾಲನೆ ನೀಡಿದ್ದು, ಇದನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 554 ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಪಡಿಸಲಾಗುವುದು. ಈ ಎಲ್ಲಾ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಕಾರ್ಯಗಳ ಮೂಲಕ ರೈಲ್ವೆ ಪ್ರಯಾಣಿಕರಿಗೆ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿ 372,13 ಕೋಟಿ ರೂ. ವೆಚ್ಚದಲ್ಲಿ 15 ರೈಲು ನಿಲ್ದಾಣಗಳಿಗೆ ಸ್ಮಾರ್ಟ್ ಟಚ್ ನೀಡಲಾಗುತ್ತದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದ ಕೆಂಗೇರಿ, ಕೃಷ್ಣರಾಜಪುರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್ ಫೀಲ್ಡ್ ರೈಲು ನಿಲ್ದಾಣಗಳು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲು ನಿಲ್ದಾಣ, ಸುಬ್ರಹ್ಮಣ್ಯ ರಸ್ತೆಯ ರೈಲು ನಿಲ್ದಾಣ ಸೇರಿ ಒಟ್ಟು 327.13 ರೂ. ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ.
ಒಡಿಶಾದಲ್ಲಿ 900 ಕೋಟಿ ರೂಪಾಯಿ ಮೊತ್ತದ 21 ಅಮೃತ್ ಭಾರತ್ ರೈಲ್ವೆ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.