ರಾಜಸ್ಥಾನ, ಫೆ 26(DajiworldNews/SK): ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತಮ ಶ್ರೇಣಿಯೊಂದಿಗೆ ಪಾಸ್ ಆಗುವುದು ಬಹುತೇಕ ಅಭ್ಯರ್ಥಿಗಳ ಕನಸಾಗಿರುತ್ತದೆ.ಆದರೆ ಉದ್ಯೋಗದ ಜೊತೆ UPSC ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳು ಹೆಚ್ಚಾಗಿ ಟಾಪ್ ರ್ಯಾಂಕ್ ನ ಆಸೆಯನ್ನೇ ಕೈ ಬಿಟ್ಟು ಪಾಸ್ ಆದರೆ ಸಾಕು ಅಂದುಕೊಳ್ಳುತ್ತಾರೆ. ಆದರೆ ಇಲೊಬ್ಬರು ಇದನ್ನು ಸವಾಲಾಗಿ ತೆಗೆದುಕೊಂಡು ಉದ್ಯೋಗದ ಜೊತೆಗೆ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಸ್ತುತಿ ಚರಣ್ ಯಶೋಗಾಥೆ.
ಸ್ತುತಿ ಚರಣ್ ಅವರು ರಾಜಸ್ಥಾನದ ಜೋಧ್ ಪುರದ ಖಾರಿ ಕಲ್ಲಾ ಎಂಬ ಹಳ್ಳಿಯಲ್ಲಿ ಜನಿಸಿದವರು. ಅವರ ತಂದೆ ರಾಮ್ ಕರಣ್ ಬರೆತ್ ಅವರು ರಾಜಸ್ಥಾನ ರಾಜ್ಯ ಉಗ್ರಾಣ ನಿಗಮದಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು, ತಾಯಿ ಸುಮನ್ ಹಿಂದಿ ಉಪನ್ಯಾಸಕಿಯಾಗಿದ್ದಾರೆ.
ಸ್ತುತಿ ಚರಣ್ ತನ್ನ ಶಾಲಾ ಶಿಕ್ಷಣವನ್ನು ಭಿಲ್ವಾರದ ವಿವೇಕಾನಂದ ಕೇಂದ್ರ ವಿದ್ಯಾಲಯದಲ್ಲಿ ಪೂರ್ಣಗೊಳಿಸಿ, ಲಾಚೂ ಮೆಮೋರಿಯಲ್ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ನಂತರ ನವದೆಹಲಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದರು.
ಇನ್ನು ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸುಕಂಡಿದ್ದ ಸ್ತುತಿ ಅವರು ಪದವಿಯ ಸಮಯದಲ್ಲೇ ನಾಗರಿಕ ಸೇವೆಗೆ ತಯಾರಿ ಆರಂಭಿಸಿದರು. ಸ್ತುತಿ ಚರಣ್ ಅವರು ಪದವಿ ಪೂರ್ಣಗೊಳಿಸಿದ ನಂತರ ಯುಕೊ ಬ್ಯಾಂಕ್ನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿಲೇ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದರು. ನಂತರ ಪರೀಕ್ಷೆ ಬರೆಯಲು ಸಿದ್ದರಾದ ಸ್ತುತಿ ಅವರಿಗೆ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.
ಆದರೆ ಛಲ ಬಿಡದೇ ಮತ್ತೆ ಪರೀಕ್ಷೆ ಬರೆಯಲು ಸಿದ್ದರಾದ ಸ್ತುತಿ ಅವರು 2012 ರಲ್ಲಿ ತನ್ನ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಪಡೆದು IAS ಆಗುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.