ಶ್ರೀನಗರ, ಫೆ 25(DajiworldNews/SK): ಜಮ್ಮು ಮತ್ತು ಕಾಶ್ಮೀರದ ಕಥುವಾ ರೈಲ್ವೆ ನಿಲ್ದಾಣದಲ್ಲಿ ಚಾಲಕನಿಲ್ಲದ ಸರಕು ಸಾಗಣೆ ರೈಲೊಂದು 70 ಕಿ. ಮೀಗೂ ಹೆಚ್ಚು ದೂರದವರೆಗೂ ಹಳಿ ಮೇಲೆ ಅಪಾಯಕಾರಿ ವೇಗವಾಗಿ ಚಲಿಸಿದ ಘಟನೆ ಭಾನುವಾರ ನಡೆದಿದೆ.
ಮೂಲಗಳ ಪ್ರಕಾರ, ಕಥುವಾ ರೈಲ್ವೆ ನಿಲ್ದಾಣದಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲನ್ನು ನಿಲ್ಲಿಸಿದ್ದ ಚಾಲಕ, ಕೆಳಕ್ಕೆ ಇಳಿಯುವ ಮುನ್ನ ಅದರ ಹ್ಯಾಂಡ್ ಬ್ರೇಕ್ ಎಳೆಯಲು ಮರೆತಿದ್ದ. ಇಳಿಜಾರಿನ ಹಳಿಯಾಗಿದ್ದರಿಂದ ರೈಲು ಮುಂದೆ ಚಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಹಳಿಗಳ ಮೇಲೆ ಮರದ ತುಂಡುಗಳನ್ನು ಇರಿಸುವ ಮೂಲಕ ಪಂಜಾಬ್ ನ ಮುಕೇರುಯನ್ ಜಿಲ್ಲೆಯ ಉಚಿ ಬಸ್ಸಿಯಲ್ಲಿ ಕೊನೆಗೂ ಅದನ್ನು ತಡೆಯುವಲ್ಲಿ ಸಫಲರಾಗಿದ್ದಾರೆ.
ಅದೃಷ್ಟಕ್ಕೆ ಅದು ಸರಕು ಸಾಗಣೆ ರೈಲಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲ. ಜೊತೆಗೆ ಯಾವುದೇ ರೈಲುಗಳಿಗೆ ಹನಿಯಾಗಿಲ್ಲ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ ಎಂದು ತಿಳಿಸಿದ್ದಾರೆ.