ಚಂಡೀಗಢ, ಫೆ 23(DaijiworldNews/AK): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ದೆಹಲಿ ಚಲೋ ಪ್ರತಿಭಟನೆ ವೇಳೆ ಖಾನೌರಿ ಗಡಿಯಲ್ಲಿ ಮತ್ತೊಬ್ಬ ಪ್ರತಿಭಟನಾನಿರತ ರೈತ ಸಾವಿಗೀಡಾಗಿದ್ದು, ಮೃತ ರೈತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಶುಕ್ರವಾರ ತಿಳಿಸಿದ್ದಾರೆ.
ಬಟಿಂಡಾ ಜಿಲ್ಲೆಯ ಅಮರ್ಗಢ ಗ್ರಾಮದ ದರ್ಶನ್ ಸಿಂಗ್ ಎಂಬ 62 ವರ್ಷದ ರೈತ ಫೆಬ್ರುವರಿ 13 ರಿಂದ ಖಾನೌರಿ ಗಡಿಯಲ್ಲಿ ಬೀಡು ಬಿಟ್ಟಿದ್ದರು.ಮೃತರು ಖಾನೌರಿ ಗಡಿಯಲ್ಲಿದ್ದರು ಮತ್ತು ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಸಾವಿಗೀಡಾದ ನಾಲ್ಕನೇ ರೈತರಾಗಿದ್ದಾರೆ. ಮೃತರನ್ನು ದರ್ಶನ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಿದರು.
'ಸಂತ್ರಸ್ತ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಈ ವರೆಗೂ ಮೂವರು ಹುತಾತ್ಮರಿಗೆ ನೀಡಿದ ಪರಿಹಾರದಂತೆಯೇ ಇವರಿಗೂ ಸೂಕ್ತ ಪರಿಹಾರ ನೀಡಬೇಕು ಮತ್ತು ಅವರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು. ಅವರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಪರಿಹಾರವನ್ನು ಒದಗಿಸಲಾಗಿದೆ' ಎಂದು ಅವರು ಹೇಳಿದರು
ಬುಧವಾರ ಮುಂಜಾನೆ, ಖಾನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಕತ್ತಿನ ಹಿಂಭಾಗಕ್ಕೆ ಗಾಯವಾಗಿ ಶುಭಕರನ್ ಸಿಂಗ್ ಎಂಬುವವರು ಸಾವಿಗೀಡಾಗಿದ್ದರು. ಇದರಿಂದ ರೈತ ಮುಖಂಡರು ಕೇಂದ್ರದೊಂದಿಗಿನ ಮಾತುಕತೆಯನ್ನು ಸ್ಥಗಿತಗೊಳಿಸಿದರು.ಶುಭಕರನ್ ನಿಧನದ ಹಿನ್ನೆಲೆಯಲ್ಲಿ ರೈತರು ಇಂದು ಕರಾಳ ಶುಕ್ರವಾರವನ್ನು ಆಚರಿಸಿದರು.