ಬೆಂಗಳೂರು, ಫೆ 23(DaijiworldNews/SK): ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕ ಮೂಲದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ. ಇದೀಗ ಯುದ್ಧಪೀಡಿತ ರಷ್ಯಾದಲ್ಲಿ ಸಿಲುಕಿಕೊಂಡಿರುವ ಯುವಕರ ರಕ್ಷಣೆಗಾಗಿ ವಿದೇಶಾಂಗ ಸಚಿವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದಿದ್ದಾರೆ.
ಕಲಬುರಗಿ ಜಿಲ್ಲೆಯ ಮೂವರು ಯುವಕರು ಹಾಗೂ ತೆಲಂಗಾಣದ ಒಬ್ಬ ಯುವಕನಿಗೆ ಉದ್ಯೋಗದ ಆಮಿಷವೊಡ್ಡಿ ಇದೀಗ ಅವರನ್ನು ಬಲವಂತವಾಗಿ ಉಕ್ರೇನ್ ವಿರುದ್ಧದ ಯುದ್ಧಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕಲಬುರಗಿ ಯುವಕರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವರದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಭಾರತದ ನೂರಕ್ಕೂ ಹೆಚ್ಚು ಯುವಕರನ್ನು ರಷ್ಯಾದ ವ್ಯಾಗ್ನರ್ ಗ್ರೂಪ್ಗೆ ಸಹಾಯಕರಾಗಿ ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.