ಗುಲ್ಮಾರ್ಗ್, ಫೆ 22(DaijiworldNews/SK): ಜಮ್ಮು ಮತ್ತು ಕಾಶ್ಮೀರದ ಪ್ರಖ್ಯಾತ ಪ್ರವಾಸಿ ತಾಣ ಗುಲ್ಮಾರ್ಗ್ನಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಕುಸಿತ ಸಂಭವಿಸಿದೆ. ಈ ದುರಂತದಲ್ಲಿ ಓರ್ವ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದು, ಇನ್ನುಳಿದಂತೆ ಐವರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ಪಡೆಗಳು ಮಾಹಿತಿ ನೀಡಿವೆ.
ಮೂಲಗಳ ಪ್ರಕಾರ, ಹಿಮಾಚ್ಛಾದಿತ ಪರ್ವತಗಳಲ್ಲಿ ಸ್ಕೀಯಿಂಗ್ ಮಾಡಲು ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗುಲ್ಮಾರ್ಗ್ಗೆ ಬರುತ್ತಾರೆ. ಇದೇ ರೀತಿ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಗುಲ್ಮಾರ್ಗ್ನ ಬ್ಯಾಕ್ ಕಂಟ್ರಿ ಪ್ರದೇಶದಲ್ಲಿ ಹಠಾತ್ ಹಿಮಪಾತ ಸಂಭವಿಸಿದೆ.
ಈ ಘಟನೆ ಸಂಭವಿಸಿದ ಕೂಡಲೇ ಅಲ್ಲಿದ್ದ ಕೆಲವರು ಓಡಿ ಪ್ರಾಣ ಉಳಿಸಿಕೊಂಡರೆ ಮೂವರು ವಿದೇಶಿಗರು ಹಿಮಪಾತದಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಹಿಮ ಕುಸಿತದ ಸುದ್ದಿ ತಿಳಿದು ಕೂಡಲೇ ಭಾರತೀಯ ಸೇನಾ ಸಿಬ್ಬಂದಿ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತದ ಗಸ್ತು ತಂಡಗಳು ಸ್ಥಳಕ್ಕೆ ಧಾವಿಸಿ ಹಿಮ ಕುಸಿತ ಸಂಭವಿಸಿದ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸಾಕಷ್ಟು ಸ್ಕೀಯಿಂಗ್ ಪಟುಗಳನ್ನು ರಕ್ಷಣೆ ಮಾಡಲಾಯ್ತು ಎಂಬ ಮಾಹಿತಿ ಲಭ್ಯವಾಗಿದೆ.