ಚಿಕ್ಕಮಗಳೂರು, ಫೆ 22 (DajiworldNews/AA): ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಶಾಸಕ ಸಿಟಿ ರವಿ ಅವರ ಬಣಗಳ ಮಧ್ಯೆ ಸಂಘರ್ಷ ಜೋರಾಗಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರ ಒಂದು ಬಣದ 'ಶೋಭಾ ಹಠಾವೋ ಬಿಜೆಪಿ ಬಚಾವೋ' ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹೈಕಮಾಂಡ್ ಗೆ ಪತ್ರ ಬರೆದಿದ್ದು, 3583 ದಿನಗಳಲ್ಲಿ 100 ದಿನವೂ ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಕೇ? ಕ್ಷೇತ್ರಕ್ಕೆ ಬಾರದ ಸಂಸದೆ ನಮಗೆ ಬೇಡವೇ ಬೇಡ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೋಭಾ ವಿರುದ್ಧ 'ಗೋ ಬ್ಯಾಕ್ ಶೋಭಾ' ಎಂಬ ಅಭಿಯಾನದ ಮುಂದುವರೆದ ಭಾಗವಾಗಿ 'ಶೋಭಾ ಹಠಾವೋ ಬಿಜೆಪಿ ಬಚಾವೋ' ಅಭಿಯಾನ ಪ್ರಾರಂಭವಾಗಿದೆ.
ಇನ್ನು ಮಾಜಿ ಶಾಸಕ ಸಿಟಿ ರವಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಮೋದಿ, ಅಮಿತ್ ಶಾ ಹಾಗೂ ಹೈಕಮಾಂಡ್ ಗೆ ಅವರ ಬೆಂಬಲಿಗರು ಪತ್ರ ಬರೆದಿದ್ದಾರೆ. ಒಂದೆಡೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಅಭಿಯಾನ ಹಾಗೂ ಸಿಟಿ ರವಿ ಅವರ ಪರ ನಡೆಯುತ್ತಿರುವ ಪತ್ರ ಅಭಿಯಾನವು ಬಿಜೆಪಿಗೆ ಮುಜುಗರ ತಂದಿದೆ.