ದೆಹಲಿ, ಫೆ 21(DaijiworldNews/AA): ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳುವಂತೆ ಪ್ರತಿಭಟನಾ ನಿರತ ರೈತರನ್ನು ಒತ್ತಾಯಿಸಲಾಗಿದ್ದು, ರೈತ ಮುಖಂಡರೊಂದಿಗೆ 5ನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಬುಧವಾರ ತಿಳಿಸಿದೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರೈತರಿಗಾಗಿ ಇಷ್ಟೊಂದು ಕೆಲಸ ಮಾಡಿದೆ. ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಮತ್ತೊಮ್ಮೆ ರೈತರ ಮುಖಂಡರೊಂದಿಗೆ ಐದನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧರಿದ್ದಾರೆ. ಅವರು ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ರೈತರೊಂದಿಗೆ ಸಂವಾದ ಹಾಗೂ ಚರ್ಚೆ ನಡೆಸುವುದರಿಂದಲೇ ಪರಿಹಾರ ಸಾಧ್ಯ. ಪರಿಹಾರವು ಶಾಂತಿಯುತವಾಗಿ ಹೊರಬರಬೇಕೆಂದು ನಾವು ಮನವಿ ಮಾಡುತ್ತೇವೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರೈತರ ಪ್ರಗತಿಗೆ ಆದ್ಯತೆ ನೀಡಿದ್ದು, ರೈತರಿಗಾಗಿ ತುಂಬಾ ಕೆಲಸವನ್ನ ಮಾಡಿದೆ. ನಮ್ಮ ಪಕ್ಷ ರೈತರ ಸಮಸ್ಯೆಗಳ ಕುರಿತು ಸಂವೇದನಾಶೀಲವಾಗಿದೆ. ರೈತರ ಕಲ್ಯಾಣ ಹಾಗೂ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ರೈತರೊಂದಿಗೆ ಸಚಿವರು ಮಾತನಾಡುತ್ತಿದ್ದಾರೆ. ಹಲವು ಸುತ್ತಿನ ಮಾತುಕತೆ ನಡೆದಿದೆ. ಇದು ಮುಂದುವರಿಯಲಿ ಎಂದು ತಿಳಿಸಿದರು.
ಇನ್ನು ಇಂದು ಸಚಿವ ಅರ್ಜುನ್ ಮುಂಡಾ ಅವರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ 5ನೇ ಸುತ್ತಿನ ಮಾತುಕತೆಗೆ ಪ್ರತಿಭಟನಾ ನಿರತ ರೈತರನ್ನು ಆಹ್ವಾನಿಸಿದ್ದರು. ಜೊತೆಗೆ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಾಂತಿ ಕಾಪಾಡಿ ಸಂವಾದದಲ್ಲಿ ತೊಡಗುವಂತೆ ಮನವಿ ಮಾಡಿದ್ದರು.