ಮಂಡ್ಯ, ಫೆ 21(DaijiworldNews/AA): ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ. ಈಗಲೂ ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಆಲೋಚನೆಯಲ್ಲಿಯೇ ಇದ್ದೇನೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕೆ ಬರಬೇಕಾ?, ಲೋಕಸಭಾಗೆ ನಿಲ್ಲಬೇಕೆಂದು ನಿರ್ಧಾರ ಮಾಡಿಲ್ಲ. ಜನರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ತಂದಿದ್ದೀರಿ. ಅದೇ ರೀತಿ ರಾಷ್ಟ್ರಮಟ್ಟದಲ್ಲೂ ಯಾಕೆ ಸುಧಾರಣೆ ತರಬಾರದೆಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನ ಮಾಡಿದಲ್ಲಿ ತಿಳಿಸುತ್ತೇನೆ ಎಂದರು.
ಲೋಕಸಭೆಗೆ ಪ್ರವೇಶ ಮಾಡುವುದು ಕೇವಲ ರಾಜಕೀಯ ಮೂಲಕವೇ ಅಲ್ಲ. ನನ್ನ ಅರ್ಥದಲ್ಲಿ ಲೋಕಸಭೆಯ ಅರ್ಥವೇ ಬೇರೆ, ರಾಜಕೀಯವೇ ಬೇರೆ. ಮುಂಬರುವ ದಿನಗಳಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ನಿಲುವು ತಿಳಿಸುತ್ತೇನೆ. ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ ಬೇಡವಾ ಎಂಬ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದರು.