ಚೆನ್ನೈ, ಫೆ 21(DaijiworldNews/AA): ಈವರೆಗೆ 'ಇಂಡಿಯಾ' ಮೈತ್ರಿಕೂಟಕ್ಕೆ ನಮ್ಮ ಪಕ್ಷ ಸೇರ್ಪಡೆಗೊಂಡಿಲ್ಲ. ಪಕ್ಷ ರಾಜಕಾರಣವನ್ನು ಬಿಟ್ಟು ರಾಷ್ಟ್ರದ ಕುರಿತು ಯೋಚಿಸಬೇಕಾದ ಸಮಯ ಇದು ಎಂದು ಎಂಎನ್ಎಂ ಪಕ್ಷದ ಮುಖಂಡ, ನಟ ಕಮಲ್ ಹಾಸನ್ ಹೇಳಿದ್ದಾರೆ.
ಪಕ್ಷದ 7ನೇ ವಾರ್ಷಿಕೋತ್ಸವದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮಕ್ಕಳ್ ನೀದಿ ಮೈಯಂ(ಎಂಎನ್ಎಂ) ಪಕ್ಷ ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಪಕ್ಷದ ಒಂದು ಭಾಗವಾಗುತ್ತದೆ ಹಾಗೂ ಆ ಪಕ್ಷವನ್ನು ಬೆಂಬಲಿಸುತ್ತದೆ ಎಂದರು.
ಇಂಡಿಯಾ ಹಾಗೂ ಎಂಎನ್ಎಂ ಪಕ್ಷದ ಮೈತ್ರಿಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಕುರಿತು ಸುಳಿವನ್ನು ಕಮಲ್ ಹಾಸನ್ ನೀಡಿದ್ದಾರೆ. ಇನ್ನು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಡಿಎಂಕೆಯೊಂದಿಗೆ ಎಂಎನ್ಎಂ ಮೈತ್ರಿ ಮಾತುಕತೆ ನಡೆಸುತ್ತಿದೆ ಎಂದು ಸುದ್ದಿ ಹರಡಿದ್ದು, ಈ ಕುರಿತಂತೆ ಕಮಲ್ ಹಾಸನ್ ಯಾವುದೇ ಮಾಹಿತಿ ನೀಡಿಲ್ಲ.