ಬೆಂಗಳೂರು, ಫೆ 20 (DaijiworldNews/AK): ರಾಜ್ಯದಲ್ಲಿ ಭಂಡ ಸರಕಾರವಿದೆ. ಮುಖ್ಯಮಂತ್ರಿಗಳೂ ಭಂಡರಿದ್ದಾರೆ. ಪಲಾಯನ ಮಾಡುವ ಮುಖ್ಯಮಂತ್ರಿ ಇವರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮಾತುಗಳನ್ನು ಸದನದಲ್ಲಿ ಕೇಳುತ್ತಿದ್ದೇನೆ. ಸದನದಲ್ಲಿ ತಮ್ಮ ರಾಜಕೀಯ ಭಾಷಣ ಮಾಡುವ ಮೂಲಕ ಸದನದ ಗೌರವವನ್ನೂ ಅವರು ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲದ ಮುಖ್ಯಮಂತ್ರಿಗಳು ಇದ್ದು, ಸದನದ ಒಳಗೆ ಆಡಳಿತ ಪಕ್ಷದ ಶಾಸಕರೂ ಕಾಣುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಬರುವ ಆಸಕ್ತಿ ತೋರಿಸುತ್ತಿಲ್ಲ. ಯಾವುದೇ ಅನುದಾನವನ್ನು ಕೊಡಲು ಸಾಧ್ಯವಾಗದ ಮುಖ್ಯಮಂತ್ರಿಗಳು ಇರುವ ಕಾರಣ ಸ್ವತಃ ಆಡಳಿತ ಪಕ್ಷದ ಶಾಸಕರು ಕೂಡ ಇವತ್ತು ಬೇಸರದಿಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ವಿಶ್ಲೇಷಿಸಿದರು.
ಇವರ ಬಜೆಟ್ನಡಿ ರಾಜ್ಯದ ಒಳಿತು ಅಸಾಧ್ಯ. ದೂರದರ್ಶಿತ್ವ ಇರದ ಬಜೆಟ್ ಇದು ಎಂದು ಟೀಕಿಸಿದರು. ಪದೇಪದೇ ಕೇಂದ್ರ ಸರಕಾರವನ್ನು ದೂರುತ್ತಿದ್ದಾರೆ. ಬರಗಾಲ ವಿಚಾರ ಮಾತನಾಡಿದರೆ ‘ಹೋಗಿ ಕೇಂದ್ರ ಸರಕಾರಕ್ಕೆ ಮಾತನಾಡಿ’ ಎನ್ನುತ್ತಾರೆ. ಇಡೀ ದೇಶದ 8-10 ರಾಜ್ಯಗಳಲ್ಲಿ ಬರಗಾಲವಿದೆ. ಆ ರಾಜ್ಯಗಳ ಮುಖ್ಯಮಂತ್ರಿಗಳು ಇವರ ಥರ ಭಂಡತನ ಮಾಡಿ ಕೂತಿಲ್ಲ. ಆ ರಾಜ್ಯಗಳ ಮುಖ್ಯಮಂತ್ರಿಗಳು ಎಲ್ಲಿ ಬರಗಾಲವಿದೆಯೋ; ಅಲ್ಲಿ ಅವರ ಖಜಾನೆಯಿಂದ ರೈತರ ಸಂಕಷ್ಟಕ್ಕೆ ಪರಿಹಾರ ಕೊಡುತ್ತಿದ್ದಾರೆ. ಅಲ್ಲಿ ರೈತರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದಾರೆ. ಇವರಂತೆ ದೆಹಲಿ ಚಲೋ ನಾಟಕ ಮಾಡಿಲ್ಲ ಎಂದು ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಸರಕಾರದ ಥರ ಆ ರಾಜ್ಯಗಳ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಪ್ರಧಾನಿಯವರನ್ನು ದೂರುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು. ಅವರವರ ಖಜಾನೆಯಿಂದ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಆದರೆ, ಇಲ್ಲಿ ರಾಜ್ಯ ಸರಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು ತಮ್ಮ ಹುಳುಕನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರವನ್ನು ದೂರುವ ಪ್ರವೃತ್ತಿ ಮುಂದುವರೆಸಿದ್ದಾರೆ. ಇವರ ನಡವಳಿಕೆ ನೋಡಿದರೆ ರಾಜ್ಯದಲ್ಲಿ ಇವತ್ತಲ್ಲ; ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೂಡ ಅಭಿವೃದ್ಧಿ ಆಗಲಾರದು ಎಂದು ನುಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಎದುರು ನೋಡುತ್ತಿರುವಂತಿದೆ. ಅವರದೇ ಸರಕಾರ ಇದ್ದರೂ ಹತಾಶರಾಗಿ ದೂರು ನೀಡುತ್ತಿದ್ದಾರೆ. ಬಿಜೆಪಿ- ಜೆಡಿಎಸ್ ವಿರುದ್ಧ ಆಧಾರಗಳಿದ್ದರೆ ಅದನ್ನು ರಾಜ್ಯದ ಜನತೆಯ ಮುಂದೆ ತರಲಿ ಎಂದು ಸವಾಲು ಹಾಕಿದರು.