ಪಂಜಾಬ್, ಫೆ 20 (DaijiworldNews/AK): ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ತಮ್ಮ ಜೀವನದಲ್ಲಿ ಯಾರೊಬ್ಬರ ಬೆಂಬಲವಿಲ್ಲದೆ, ತಾವೇ ಸ್ವತಃ ಕಷ್ಟಪಟ್ಟು ಜೀವನದಲ್ಲಿ ಯಶಸ್ಸು ಸಾಧಿಸಿದ ಮತ್ತು ತಮ್ಮ ಜೀವನವನ್ನು ಉತ್ತಮವಾಗಿ ಕಟ್ಟಿಕೊಂಡಿರುವುದನ್ನು ನಾವು ನೋಡುತ್ತೇವೆ. ಅಂತಹ ಒಂದು ಸ್ಪೂರ್ತಿದಾಯಕ ಯಶಸ್ಸಿನ ಕಥೆಯೊಂದು ಇಲ್ಲಿದೆ ನೋಡಿ, ನವಜೋತ್ ಸಿಮಿ ಅವರು ಮೊದಲಿಗೆ ಒಬ್ಬ ವೈದ್ಯೆಯಾಗಿದ್ದವರು ಈಗ ಐಪಿಎಸ್ ಅಧಿಕಾರಿಯಾಗಿದ್ದಾರೆ ನೋಡಿ.
ನವಜೋತ್ ಸಿಮಿ ಅವರು 21ನೇ ಡಿಸೆಂಬರ್ 1987 ರಂದು ಪಂಜಾಬ್ನ ಗುರುದಾಸ್ಪುರದಲ್ಲಿ ಜನಿಸಿದರು. ಅವರು ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಪದವಿಯನ್ನು ಲುಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಿಂದ ಪಡೆದರು.
ಸಿಮಿ ದಂತ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು . ಬಳಿಕ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗಲು ನಿರ್ಧರಿಸುವ ಮೊದಲು ಸ್ವಲ್ಪ ಸಮಯ ವೈದ್ಯೆಯಾಗಿ ಕೆಲಸ ಮಾಡಿದರು.ನವಜೋತ್ ಅವರು ದೆಹಲಿಯ ಪ್ರತಿಷ್ಠಿತ ಸಂಸ್ಥೆಯಿಂದ ತರಬೇತಿ ಪಡೆದರು ಮತ್ತು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ 735ನೇ ರ್ಯಾಂಕ್ ಪಡೆದು ಪಾಸ್ ಮಾಡಿದರು.
ಪರೀಕ್ಷೆಯನ್ನು ಪಾಸ್ ಮಾಡಿದ ನಂತರದಲ್ಲಿ ಐಪಿಎಸ್ ಸೇವೆ ಮತ್ತು ಬಿಹಾರ್ ಕೇಡರ್ ಅನ್ನು ಅವರಿಗೆ ನೀಡಲಾಯಿತು. ನಂತರ ಅವರನ್ನು ಪಾಟ್ನಾದ ಡಿಎಸ್ಪಿಯಾಗಿ ನೇಮಿಸಲಾಗಿದೆ. ಐಪಿಎಸ್ ಅಧಿಕಾರಿಯಾಗಿ, ಅವರು ಸಮಾಜದಲ್ಲಿ ಆಗುವಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತುಂಬಾನೇ ಸಕ್ರಿಯರಾಗಿದ್ದಾರೆ ಮತ್ತು ಹಲವಾರು ಫಾಲೋವರ್ಗಳನ್ನು ಸಹ ಇವರು ಹೊಂದಿದ್ದಾರೆ.
ಸಾಮಾನ್ಯವಾಗಿ ಒಬ್ಬ ಐಎಎಸ್ ಅಥವಾ ಐಪಿಎಸ್ ಅಧಿಕಾರಿ ತಮ್ಮ ಕ್ಷೇತ್ರದಲ್ಲಿಯೇ ಕೆಲಸ ಮಾಡುವ ಇನ್ನೊಬ್ಬ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯನ್ನು ಮದುವೆಯಾಗುವುದನ್ನು ನಾವೆಲ್ಲಾ ನೋಡಿರುತ್ತೇವೆ. , ನವಜೋತ್ ಅವರು ಐಎಎಸ್ ತುಷಾರ್ ಸಿಂಗ್ಲಾ ಅವರನ್ನು ವಿವಾಹವಾಗಿದ್ದಾರೆ. ತುಷಾರ್ ಅವರು ಸಹ ಪಂಜಾಬ್ ರಾಜ್ಯದವರಾಗಿದ್ದಾರೆ. 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 86ನೇ ರ್ಯಾಂಕ್ ಪಡೆದುಕೊಂಡು ಪಾಸ್ ಮಾಡಿದ್ದಾರೆ. ಅವರು ಪ್ರಸ್ತುತ ಬಿಹಾರದ ಬಂಕಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡಿದ್ದಾರೆ.