ಹುಬ್ಬಳ್ಳಿ, ಫೆ 19 (DaijiworldNews/AK): ಬಿಜೆಪಿಯವರು ಅಗತ್ಯವಿದ್ದಾಗ ಮಾತ್ರ ಜಾತ್ಯತೀತತೆ ಬಗ್ಗೆ ಮಾತನಾಡ್ತಾರೆ. ʻಕೈಮುಗಿದು ಒಳಗೆ ಬಾ ಅಥವಾ ಧೈರ್ಯವಾಗಿ ಪ್ರಶ್ನಿಸಿʼ ಅನ್ನೋದು ಎರಡೂ ಒಂದೇ ಅಂತ ಹೇಳುವ ಮೂಲಕ ವಸತಿ ಶಾಲೆಗಳ ದ್ವಾರದಲ್ಲಿದ್ದ ಘೋಷವ್ಯಾಕ ಬದಲಾವಣೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಮರ್ಥಿಸಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಞಾನ ದೇಗುಲಕ್ಕೆ ಜ್ಞಾನ ತೆಗೆದುಕೊಳ್ಳಲು ಬನ್ನಿ. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಧೈರ್ಯದಿಂದ ಜೀವನ ಸಾಗಿಸಿ, ಇದರ ಬಗ್ಗೆ ನಾನು ಜಾಸ್ತಿ ಹೇಳಿದ್ರೆ ಪರ ವಿರುದ್ಧದ ಹೇಳಿಕೆಗಳು ಹೆಚ್ಚಾಗುತ್ತೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೀಡಾದ ಘಟನೆ ನಡೆದಿದೆ. ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ. ಇದು ಆಡಳಿತ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಚರ್ಚೆಗೆ ಕಾರಣವಾಗಿದೆ.