ತಮಿಳುನಾಡು, ಫೆ 19(DaijiworldNews/AA): ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಹಾಗೂ ನಟ, ರಾಜಕಾರಣಿ ಕಮಲ್ ಹಾಸನ್ ಅವರ ಎಂಎನ್ ಎಂ (ಮಕ್ಕಳ್ ನೀಧಿ ಮೈಯಂ) ಪಕ್ಷ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಸೀಟು ಹಂಚಿಕೆ ಬಗ್ಗೆ ಎರಡು ಪಕ್ಷಗಳಲ್ಲಿ ಅಂತಿಮ ಚರ್ಚೆ ನಡೆಯುತ್ತಿದೆ. ಎರಡೂ ಪಕ್ಷಗಳು ಒಟ್ಟಿಗೆ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಡಿಎಂಕೆಯೊಂದಿಗಿನ ವಿಲೀನದ ಬಗ್ಗೆ ಕಮಲ್ ಹಾಸನ್ ಸುಳಿವು ನೀಡಿದ್ದರು. ಇದರಲ್ಲಿ ಕಾಂಗ್ರೆಸ್ ಪಕ್ಷ ಸಹ ಭಾಗಿಯಾಗಿದೆ. ಇದೀಗ ಎಂಕೆ ಸ್ಟಾಲಿನ್ ಅವರೊಂದಿಗಿನ ಭೇಟಿಯ ಬಳಿಕ ಚುನಾವಣೆಗೆ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ತಮಿಳುನಾಡು ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಅಧಿವೇಶನದ ನಂತರ ಕಮಲ್ ಹಾಸನ್ ಹಾಗೂ ಡಿಎಂಕೆ ನಾಯಕರೊಂದಿಗೆ ಸಭೆ ನಡೆಸಲು ಯೋಜಿಸಲಾಗಿದೆ. ಎಂಎನ್ ಎಂ ಪಕ್ಷಕ್ಕೆ ಒಂದು ಸ್ಥಾನವನ್ನು ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಕಮಲ್ ಹಾಸನ್ ಕೊಯಮತ್ತೂರು ಅಥವಾ ವೇಗಿ ಉತ್ತರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.