ಚಂಡೀಗಢ, ಫೆ 19(DaijiworldNews/AA): ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ಸಾಲ ಮನ್ನಾ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರೊಂದಿದೆ ಕೇಂದ್ರ ಸಚಿವರ ತಂಡ 4ನೇ ಸುತ್ತಿನ ಸುದೀರ್ಘ ಮಾತುಕತೆಯನ್ನು ಚಂಡೀಗಢದ ಸೆಕ್ಟರ್ 26ರಲ್ಲಿರುವ ಮಹಾತ್ಮ ಗಾಂಧಿ ರಾಜ್ಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ನಡೆಸಿದೆ.
ರೈತ ಮುಖಂಡರೊಂದಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರೂ ಕೂಡ ಉಪಸ್ಥಿತರಿದ್ದರು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪೀಯೂಷ್ ಗೋಯಲ್ ಅವರು, ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು 5 ವರ್ಷಗಳ ತನಕ ಕನಿಷ್ಠ ಬೆಂಬಲ ಬೆಲೆಯಲ್ಲಿ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಪ್ರಸ್ತಾಪವನ್ನು ಸಮಿತಿಯು ರೈತರ ಮುಂದಿಟ್ಟಿದೆ. ಸರ್ಕಾರದ ಈ ಪ್ತಸ್ತಾಪವನ್ನು ತಮ್ಮ ವಲಯದಲ್ಲಿ ಚರ್ಚೆ ನಡೆಸಿ 2 ದಿನಗಳೊಳಗೆ ತಮ್ಮ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ರೈತ ನಾಯಕರು ತಿಳಿಸಿದ್ದಾರೆ ಎಂದರು.
ಹುರಳಿ ಬೇಳೆ, ಉದ್ದಿನ ಬೇಳೆ, ಮಸೂದರ್ ದಾಲ್ ಅಥವಾ ಮೆಕ್ಕೆಜೋಳವನ್ನು ಮುಂದಿನ 5 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟವು ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಖರೀದಿಯ ಪ್ರಮಾಣಕ್ಕೆ ಯಾವುದೇ ಮಿತಿ ಇಲ್ಲ. ಇದಕ್ಕಾಗಿ ಹೊಸ ಪೋರ್ಟಲ್ ಒಂದನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಪ್ರಸ್ತಾಪವಗಳ ಕುರಿತು ಮಾತನಾಡಿದ ರೈತ ನಾಯಕ ಸರ್ವನ್ ಸಿಂಗ್ ಪಂದೆರ್ ಅವರು, ಫೆಬ್ರವರಿ 19–20ರಂದು ಈ ವಿಚಾರವನ್ನು ನಮ್ಮ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು, ನಿರ್ಧಾರವನ್ನ ಪ್ರಕಟಿಸುತ್ತೇವೆ. ಸಾಲ ಮನ್ನಾ ಮತ್ತು ಇನ್ನಿತರ ಬೇಡಿಕೆಗಳ ಕುರಿತು ಚರ್ಚೆ ಬಾಕಿ ಇದೆ. ಇದೂ ಸಹ ಇನ್ನೆರಡು ದಿನಗಳಲ್ಲಿ ಬಗೆಹರಿಯುವ ಸಾಧ್ಯತೆ ಇದೆ. 'ದೆಹಲಿ ಚಲೋ' ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಸಮಸ್ಯೆಗಳು ಬಗೆಹರಿಯದಿದ್ದರೆ ಫೆಬ್ರವರಿ 21ರಂದು ಬೆಳಿಗ್ಗೆ 11 ಗಂಟೆಗೆ ಮುಂದುವರಿಯಲಿದೆ ಎಂದು ಅವರು ಹೇಳಿದರು.