ಹಾವೇರಿ, ಫೆ 18(DaijiworldNews/AA): ಉಚಿತ ಕಣ್ಣಿನ ಚಿಕಿತ್ಸೆ ನೀಡುವ ಆಶಾ ಕಿರಣ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ನಗರದ ಕೊಳ್ಳಿ ಕಾಲೇಜು ಮೈದಾನದಲ್ಲಿ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಾ ಕಿರಣ ಯೋಜನೆಯಡಿ ನೇತ್ರ ಸಮಸ್ಯೆವುಳ್ಳ ಮಕ್ಕಳಿಗೆ ಕನ್ನಡಕ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕಣ್ಣಿನ ದೋಷವಿರುವವರಿಗೆ ದೋಷ ಸರಿಪಡಿಸಲು ಆಶಾ ಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಹಾವೇರಿ ಜಿಲ್ಲೆಗೆ 1400 ಕೋಟಿ ರೂ. ಹಣ ಗ್ಯಾರಂಟಿ ಯೋಜನೆಗಳಿಗೆ ನೀಡಿದ್ದೇವೆ. ಇದೊಂದೇ ಜಿಲ್ಲೆಗೆ 1400 ಕೋಟಿ ಹಣ ನೀಡಿರುವುದು. ಬಜೆಟ್ನಲ್ಲಿ 52,000 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಾಗಿ ಘೋಷಣೆ ಮಾಡಿದ್ದೇನೆ ಎಂದು ಹೇಳಿದರು.
ಜನರ ಕೈಗೆ ಹಣ ನೀಡುವ ಕಾರ್ಯಕ್ರಮವನ್ನು ಇದುವರೆಗೆ ಯಾರೂ ಮಾಡಿಲ್ಲ. ನಮ್ಮ ವಿರೋಧಿಗಳು ಗ್ಯಾರಂಟಿ ಘೋಷಣೆ ಮಾಡಿದಾಗ ಗ್ಯಾರಂಟಿ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ರಾಜ್ಯ ದಿವಾಳಿಯಾಗುತ್ತದೆ ಎಂದರು. ಈ ವರ್ಷ ನಾವು 36,000 ಕೋಟಿ ರೂ. ಹಣ ಖರ್ಚು ಮಾಡಿದರೂ ದಿವಾಳಿಯಾಗಿಲ್ಲ ಎಂದರು. ಈ ವರ್ಷಕ್ಕೆ ಬಜೆಟ್ ಗಾತ್ರ 46,000 ಕೋಟಿ ರೂ. ಏರಿಕೆಯಾಗಿದೆ. ಹೀಗಿದ್ದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಲು ಸಾಧ್ಯಾನಾ ಎಂದು ಅವರು ಪ್ರಶ್ನಿಸಿದರು.