ಹುಬ್ಬಳ್ಳಿ, ಫೆ 18(DaijiworldNews/AA): ರಾಮ ಮಂದಿರ ನಿರ್ಮಿಸುವುದರಿಂದ ಬಡತನ ನಿರ್ಮೂಲನೆಯಾಗುವುದಿಲ್ಲ. ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ರಾಮ ಮಂದಿರ ನಿರ್ಮಿಸಲಾಗಿದೆ. ಅದು ಕೂಡ ಶೇ.40 ರಷ್ಟು ಮಾತ್ರ ನಿರ್ಮಾಣ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮ ಮಂದಿರ ನಿರ್ಮಾಣವಾಗಿಲ್ಲ. ದೇಶದಲ್ಲಿ ಕಳೆದ 10 ವರ್ಷಗಳಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. ರಾಮ ಮಂದಿರದ ಹೆಸರಿನಲ್ಲಿ ಯಾಕೆ ಮತ ಕೇಳುತ್ತೀರಿ? ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಏನು ಕೆಲಸ ಮಾಡಿದೆ? ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ದರ ಇಳಿಕೆಯಾಗಿದೆಯಾ? ಎಂದು ಪ್ರಶ್ನಿಸಿದರು.
ಬಡವರಿಗೆ ಅನುಕೂಲ ಆಗುವಂತಹ ಒಂದು ಕಾರ್ಯಕ್ರಮವನ್ನೂ ಮೋದಿ ಸರ್ಕಾರ ಮಾಡಿಲ್ಲ. ನಮ್ಮ ದೇಶ ಹಳ್ಳ ಹಿಡಿದು ಹೋಗಿದೆ. ಅಧಿಕಾರವಿದೆ ಎಂದು ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು. ನೀವು ಪ್ರಭಾವಿಯಾಗಿದ್ದರೆ ಟಿವಿ ಆಫ್ ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ, ಅಪಘಾನಿಸ್ತಾನ ಎಂಬ ಹೆಸರಿನಿಂದ ಜನರನ್ನ ಹುಚ್ಚರನ್ನಾಗಿ ಮಾಡ್ತಾರೆ. ಈ ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಕುರಿತು ಮಾತನಾಡಿದ್ದರು. ಹಾಗಿದ್ದರೆ ಆರ್ ಡಿಎಕ್ಸ್ ಹೇಗೆ ಬಂತು? ನಮ್ಮ ದೇಶದಲ್ಲಿ ಈ ರೀತಿಯ ಚರ್ಚೆಯೇ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.