ನವದೆಹಲಿ, ಫೆ 18(DaijiworldNews/AA): ಭಾರತೀಯ ವಾಯುಪಡೆಯ (ಐಎಎಫ್) ಚಿನೂಕ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಿದೆ.
ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೇನಾಧಿಕಾರಿಗಳು ಇನ್ನು ಬಹಿರಂಗಪಡಿಸಿಲ್ಲ.
ಚಿನೂಕ್ ಹೆಲಿಕಾಪ್ಟರ್ ಗಳನ್ನು ಅಮೆರಿಕ ಮೂಲದ ಬೋಯಿಂಗ್ ಸಂಸ್ಥೆ ತಯಾರಿಸಿದ್ದು, ಈ ಹೆಲಿಕಾಪ್ಟರ್ ಗಳನ್ನು ಸೇನಾ ತುಕಡಿಗಳು, ಆರ್ಟಿಲರಿ, ಸಲಕರಣೆ ಹಾಗೂ ಇಂಧನವನ್ನು ವೇಗವಾಗಿ ಸಾಗಿಸಲು ಬಳಸಲಾಗುತ್ತದೆ. ಇನ್ನು ಈ ಹೆಲಿಕಾಪ್ಟರ್ ಗಳನ್ನು ನೈಸರ್ಗಿಕ ವಿಕೋಪದಂತಹ ವೇಳೆಯಲ್ಲಿ ಕಾರ್ಯಾಚರಣೆಗೆ, ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿಗಳನ್ನು ಒದಗಿಸಲು ಹಾಗೂ ಸಂತ್ರಸ್ತರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಲು ಬಳಸಲಾಗುತ್ತದೆ.