ಬೆಂಗಳೂರು, ಫೆ 17(DaijiworldNews/SK): ದಕ್ಷಿಣ ಭಾರತಕ್ಕಾಗಿ ಪ್ರತ್ಯೇಕ ರಾಷ್ಟ್ರದ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಸಂಬಂಧಿಸಿದಂತೆ ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಎಂದು ಹೇಳಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ ಅವರು, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಮತ್ತು ವಿಚಾರಣೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ನ್ಯಾಯಪೀಠ ಈ ಆದೇಶಗಳನ್ನು ಹೊರಡಿಸಿದೆ. ಇದರೊಂದಿಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ನಮ್ಮ ರಾಜಕೀಯ ನಾಯಕರು ಏಕೆ ಉತ್ತಮ ಭಾಷೆಗಳನ್ನು ಬಳಸುತ್ತಿಲ್ಲ? ಹೇಳಿಕೆಗಳನ್ನು ನೀಡುವಾಗ ಉತ್ತಮ ಸಂಸ್ಕೃತಿಯನ್ನು ಏಕೆ ಪ್ರತಿಬಿಂಬಿಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕರ್ನಾಟಕ ರಾಜ್ಯದಲ್ಲಿ ವಿಭಿನ್ನ ಸಿದ್ಧಾಂತಗಳ ಅನುಸರಿಸುವ ಜನತೆ ಇರುವ ಕಾರಣ ರಾಜಕಾರಣಿ ಅಧಿಕಾರಿಗಳು ಜಾಗರೂಕರಾಗಿರಬೇಕು. ಶಾಲಾ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎಂದು ತಿಳಿ ಹೇಳಿದ್ದಾರೆ.