ದೇವನಹಳ್ಳಿ, ಫೆ 16 (DaijiworldNews/AA): ಒಂದು ವಾರದಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆ ಚಳಿ, ಜ್ವರ ಬಿಡಿಸಿದ್ದೀವಿ. ಇದೇ ಮೊದಲ ಬಾರಿ ಬಜೆಟ್ ಮಂಡನೆ ವೇಳೆ ಪ್ರತಿಭಟನೆ ನಡೆಸಿದ್ದೇವೆ. 40% ಕಾಂಗ್ರೆಸ್ ಸರ್ಕಾರದ ಬಜೆಟ್ ಪಾರದರ್ಶಕವಾಗಿ ಇರಬೇಕಿತ್ತು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸಭೆಯ ವಿಪಕ್ಷ ನಾಯಕನಾಗಿ ಹಾಗೂ ಬಿ.ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಹೊಸ ಹುರುಪು ಬಂದಿದೆ. ಸರ್ಕಾರದ ಬಜೆಟ್ ಗೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಬಜೆಟ್ ಓದುವಾಗಲೇ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ ಒಬ್ಬರೇ ಅಲ್ಲ, ಬಿಜೆಪಿಯವರು ಬಜೆಟ್ ಮಂಡನೆ ಮಾಡಿದ್ದೇವೆ. ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡಿಸುವಾಗ ನಾವು ಎಂದಿಗೂ ಕೇಂದ್ರ ಸರ್ಕಾರವನ್ನು ತೆಗಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿ ಒಂದು ರೀತಿ ಚುನಾವಣೆಯ ಸ್ಟಂಟ್ ಗಾಗಿ ಸೋನಿಯಾ ಗಾಂಧಿ ಮೆಚ್ಚಿಸಲು ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಸಿಎಂ ಅವರ ಸೇಡಿನ ಭಾಷಣದ ವಿರುದ್ಧ ನಾನು ಮಾತನಾಡಿದ್ದೇನೆ. 7 ಕೋಟಿ ಜನರ ವಿರುದ್ಧ ಸೇಡು ತೀರಿಸಿಕೊಳ್ಳುವ ರೀತಿ ಬಜೆಟ್ ಮಂಡಿಸಲಾಗಿದೆ. ಆದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.