ಬೆಂಗಳೂರು, ಫೆ 16 (DaijiworldNews/SK): ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಇದು ರಾಜ್ಯದ ಜನತೆಯ ಕಿವಿ ಮೇಲೆ ಹೂವು ಮುಡಿಸಿದ ಬಜೆಟ್ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಬಜೆಟ್ ಸಿದ್ದರಾಮಯ್ಯ ಅವರ 15ನೇ ಬಜೆಟ್ ಆಗಿದ್ದು, ಇನ್ನು ಮುಂದೆ ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಮಂಡಿಸೋರು ಬರುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಈ ಬಾರಿ ಮಾತ್ರ ಸಿದ್ದರಾಮಯ್ಯ ಅವರು ಕಳೆದ ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುವಾಗ ಕಿವಿಗೆ ಇಟ್ಟುಕೊಂಡು ಬಂದಿದ್ದ ಹೂವನ್ನು 7 ಕೋಟಿ ಜನರ ಕಿವಿಗೆ ಈಗ ಮುಡಿಸಿದ್ದಾರೆ ಲೇವಡಿ ಮಾಡಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರಿಗೆ ಆಡಳಿತದ ಅನುಭವ ಇದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅವರು ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಅಂತ. ಇದರ ಜೊತೆಗೆ ಈ ಸರ್ಕಾರ ಗ್ಯಾರಂಟಿಯ ಗುಂಗಿನಿಂದ ಹೊರಗೆ ಬಂದಿಲ್ಲ. 10 ತಿಂಗಳು ಕಳೆದರೂ ಗ್ಯಾರಂಟಿ ಬಗ್ಗೆ ಕನವರಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.