ಬೆಂಗಳೂರು, ಫೆ 16 (DaijiworldNews/HR): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 15ನೇ ಬಜೆಟ್ ಮಂಡನೆ ಮಾಡುತ್ತಿದ್ದು, 80 ವರ್ಷ ಮೇಲ್ಪಟ್ಟ ಹಿರಿಯರ ಮನೆ ಬಾಗಿಲಿಗೆ ಆಹಾರ ಬರುವ ನಿಟ್ಟಿನಲ್ಲಿ ಅನ್ನ ಸುವಿಧಾ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಅನ್ನ-ಸುವಿಧಾ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲಿವೆರಿ ಆಪ್ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.
ಇನ್ನು ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ ಐದು ಕೆ.ಜಿ. ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ, ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಪ್ರತಿ ಮಾಹೆ 170 ರೂ. ನೇರ ನಗದು ವರ್ಗಾವಣೆ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಜನವರಿ 2024ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದರು.
ಡಾ| ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಹಾಗೂ 'ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಈಡೇರಿಸಲು ನೆರವಾಗಲಿದೆ ಎಂದಿದ್ದಾರೆ.