ಬೆಂಗಳೂರು, ಫೆ 15 (DaijiworldNews/MS): 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಸಿಎಂ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ಈ ವೇಳೆ ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದು, ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಬಜೆಟ್ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದು, ಸ್ಪೀಕರ್ ಯುಟಿ ಖಾದರ್ ಪರಿಪರಿಯಾಗಿ ಬೇಡಿಕೊಂಡರೂ ಪ್ರತಿಪಕ್ಷ ನಾಯಕರು ಆಕ್ರೋಶದ ಮಾತುಗಳನ್ನು ಕಡಿಮೆ ಮಾಡಲಿಲ್ಲ. ಇದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ನಾಯಕರು ಬಜೆಟ್ಗೆ ಬಹಿಷ್ಕಾರ ಹಾಕಿ ಹೊರನಡೆದರು.
ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದರು.
ಬಜೆಟ್ ಮಂಡನೆ ಮುಂಚೆಯೇ ಸದನದಲ್ಲಿ ಪ್ಲಕಾರ್ಡ್ ಅಥವಾ ಭಿತ್ತಿಪತ್ರ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದ್ದು ಆದರೆ ಪ್ಲಕಾರ್ಡ್ಗಳನ್ನು ಒಳಗೆ ತೆಗೆದುಕೊಂಡು ಹೋಗಲು ಮಾರ್ಷಲ್ಗಳು ಬಿಟ್ಟಿರಲಿಲ್ಲ. ಹೀಗಾಗಿ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ ಬಜೆಟ್ನಲ್ಲಿ ಹೇಳಿರುವುದೆಲ್ಲಾ ನಿಜವಲ್ಲ’ ಎಂದು ಬರೆಯಲ್ಪಟ್ಟಿರುವ ಪೋಸ್ಟರ್ಗಳನ್ನು ತೆಗೆದುಕೊಂಡು ಒಳಹೋಗಿದ್ದರು.