ಬೆಂಗಳೂರು, ಫೆ 15(DaijiworldNews/SK): ಅಬುಧಾಬಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ಮೋದಿ ಫೆ.14ರಂದು ಲೋಕಾರ್ಪಣೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ಹೆಸರಾಂತ ನಟಿ, ಸಂಸದೆ ಸುಮಲತಾ ಅಂಬರೀಶ್ ಕೂಡ ಪಾಲ್ಗೊಂಡಿದ್ದು, ಇದರ ಅದ್ಭುತ ಕ್ಷಣವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಸುಮಲತಾ ಅಂಬರೀಶ್ ಅವರು, ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಸಂಕೇತವಾಗಿರುವ ಅಬುಧಾಬಿಯ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯು (BAPS) ನಿರ್ಮಿಸಿರುವ ಬೃಹತ್ ಹಿಂದೂ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಲು ಅವಕಾಶ ಸಿಕ್ಕಿದ್ದು ಅತ್ಯಂತ ಹೆಮ್ಮೆ ಮತ್ತು ಭಗವಂತನ ಆಶೀರ್ವಾದವಾಗಿದೆ.
ವಸುದೈವ ಕುಟುಂಬಕಂ ಸಿದ್ಧಾಂತವನ್ನು ಯಾವಾಗಲೂ ಪ್ರತಿಪಾದಿಸುವ, ಜಗತ್ತೇ ಮೆಚ್ಚುವ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಂದಿರ ಉದ್ಘಾಟಿಸಿ, ಅಬುಧಾಬಿಯಲ್ಲಿ ಆಡಿದ ಸ್ಪೂರ್ತಿದಾಯಕ ಮಾತುಗಳು ಯುಎಇ ಮತ್ತು ಭಾರತದ ನಡುವಿನ ಬಾಂಧವ್ಯಕ್ಕೆ ಮತ್ತಷ್ಟು ಬಲ ತರುವುದರಲ್ಲಿ ಎರಡು ಮಾತಿಲ್ಲ.ಇಂತಹ ಪ್ರಧಾನಿ ಪಡೆದಿರುವುದು ನಮ್ಮೆಲ್ಲರ ಪುಣ್ಯ.
ಅಬುಧಾಬಿಯ ನೆಲದಲ್ಲಿ ಬೃಹತ್ ಹಿಂದೂ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಯಂತಹ ಐತಿಹಾಸಿಕ ಕ್ಷಣಕ್ಕೆ ಹಾಗೂ ಆ ದೈವಿಕ ಅನುಭವಕ್ಕೆ ಸಾಕ್ಷಿಯಾಗಲು ನನಗೆ ಅವಕಾಶ ಮಾಡಿಕೊಟ್ಟ BAPS ಸಂಸ್ಥೆಯ ಸರ್ವರಿಗೂ ಮನತುಂಬಿದ ಕೃತಜ್ಞತೆಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.