ಚೆನ್ನೈ, ಫೆ 15 (DaijiworldNews/MS): ತಮಿಳುನಾಡಿನ ಮಲಯಾಳಿ ಬುಡಕಟ್ಟಿನ 23 ವರ್ಷದ ಮಹಿಳೆಯೊಬ್ಬರು ಮೊದಲ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿ ಕೀರ್ತಿ ಬರೆದಿದ್ದಾರೆ. ವಿಶೇಷ ಎಂದರೆ ಎರಡು ದಿನದ ಬಾಣಂತಿಯಾಗಿದ್ದ ಇವರು ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎದುರಿಸಿದ್ದರು.
ತಿರುಪತ್ತೂರು ಜಿಲ್ಲೆಯ ಯಳಗಿರಿ ಬೆಟ್ಟದವರಾದ ವಿ ಶ್ರೀಪತಿಯವರು, ನ್ಯಾಯಾಧೀಶೆಯಾದ ಬುಡಕಟ್ಟು ಜನಾಂಗದ ಮೊದಲ ಹುಡುಗಿಯಾಗಿದ್ದಾರೆ. ತಿರುವಣ್ಣಾಮಲೈನ ಮೀಸಲು ಅರಣ್ಯದ ಗಡಿಯಲ್ಲಿರುವ ತುವಿಂಜಿಕುಪ್ಪಂನಲ್ಲಿ ಜನಿಸಿದ ಶ್ರೀಪತಿ, ಕಾಳಿಯಪ್ಪನ್ ಮತ್ತು ಮಲ್ಲಿಗಾ ದಂಪತಿಯ ಹಿರಿಯ ಮಗಳಾಗಿದ್ದಾರೆ.
ಶ್ರೀಪತಿಯವರ ಈ ಸಾಧನೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, " ಬೆಟ್ಟದ ಹಳ್ಳಿಯ ಬುಡಕಟ್ಟು ಜನಾಂಗದ ಹುಡುಗಿಯೊಬ್ಬರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ನನಗೆ ಖುಷಿ ತಂದಿದೆ" ಎಂದು ಹೇಳಿದ್ದಾರೆ.
ಶಾಲಾ ಶಿಕ್ಷಣವನ್ನು ಎಳಗಿರಿ ಬೆಟ್ಟದಲ್ಲಿ ಪೂರ್ಣಗೊಳಿಸಿ ನಂತರ ಬಿ.ಎ ಮತ್ತು ಕಾನೂನು ಪದವಿ ಪಡೆದ ಇವರು, ಅದೇ ವೇಳೆ ವೆಂಕಟ್ರಮಣ ಎಂಬವರನ್ನು ವಿವಾಹವಾದರು. ವಿವಾಹದ ನಂತರ ಇವರ ಶಿಕ್ಷಣಕ್ಕೆ ಅಡ್ಡಿಪಡಿಸದೆ ಇವರ ಪರಿ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದರು. ಹೀಗೆ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರು TNPSC ಸಿವಿಲ್ ಜಡ್ಜ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಇದೇ ವೇಳೆಯಲ್ಲಿ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದ ಶ್ರೀಪತಿ - ವೆಂಕಟ್ರಮಣ ದಂಪತಿಗಳಿದ್ದರು. ಕಾಕತಾಳಿಯವೆಂಬಂತೆ ಸಿವಿಲ್ ಜಡ್ಜ್ ಪರೀಕ್ಷೆಯ ಎರಡು ದಿನಗಳ ಮುಂಚೆ ಶ್ರಿಪತಿಯವರಿಗೆ ಹೆರಿಗೆಯಾಗಿದೆ. ತನ್ನ ಕನಸುಗಳು ಯಾವುದೇ ಕಾರಣಕ್ಕೂ ಕಮರಿ ಹೋಗಬಾರದೆಂದು ಪತಿ ಹಾಗೂ ಕುಟುಂಬಸ್ಥರ ಸಹಾಯದಿಂದ ಹೆರಿಗೆಯಾದ ಎರಡು ದಿನಗಳ ಬಳಿಕ ಶ್ರೀಪತಿ ಚೆನ್ನೈಗೆ ಬಂದು ಸಿವಿಲ್ ಜಡ್ಜ್ ಪರೀಕ್ಷೆ ಬರೆದಿದ್ದಾರೆ. ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಶ್ರೀಪತಿ ತಮಿಳುನಾಡಿನ ಮೊದಲ ಅದಿವಾಸಿ ಮಹಿಳಾ ಸಿವಿಲ್ ನ್ಯಾಯಾಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.