ಬೆಂಗಳೂರು,ಫೆ 14 (DaijiworldNews/ AK):ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಒಟ್ಟು ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಒಂದು ದಿನ (ಫೆಬ್ರವರಿ 15) ಬಾಕಿ ಇರುವಾಗಲೇ ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಇಬ್ಬರಿಗೆ ಮತ್ತೆ ಅವಕಾಶ ನೀಡಿದೆ.
ಜಿ.ಸಿ.ಚಂದ್ರಶೇಖರ್ ಮತ್ತು ನಾಸೀರ್ ಹುಸೇನ್ ಅವರಿಗೆ ಕಾಂಗ್ರೆಸ್ ಮತ್ತೊಮ್ಮೆ ಟಿಕೆಟ್ ನೀಡಿದೆ. ಇನ್ನು ಎಐಸಿಸಿ ಖಜಾಂಚಿಯಾಗಿರುವ ದೆಹಲಿ ಮೂಲದ ಅಜಯ್ ಮಕೇನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಲಾಗಿದೆ.
ತೆಲಂಗಾಣದಲ್ಲಿ ರೇಣುಕಾ ಚೌಧರಿ, ಅನಿಲ್ಕುಮಾರ್ ಯಾದವ್ಗೆ ಟಿಕೆಟ್ ನೀಡಿದ್ರೆ , ಮಧ್ಯಪ್ರದೇಶದಲ್ಲಿ ಅಶೋಕ್ ಸಿಂಗ್ಗೆ ಟಿಕೆಟ್ ಘೋಷಿಸಲಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಬಾಗಲಕೋಟೆ ಮೂಲದ ಸಂಘ ಪರಿವಾರದ ಕಟ್ಟಾಳು ನಾರಾಯಣ ಬಾಂಡಗೆ ಟಿಕೆಟ್ ಘೋಷಿಸಿದೆ.
ನಾಮಪತ್ರ ಸಲ್ಲಿಸಲು ನಾಳೆ(ಫೆ.15) ಕೊನೆ ದಿನ. ಕಾಂಗ್ರೆಸ್ನಿಂದ ಮೂವರು ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ದೆಹಲಿ ಮೂಲದ ಅಜಯ್ ಮಾಕೆನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿರುವುದರಿಂದ ಅವರು ಇಂದು ಬೆಂಗಳೂರಿಗೆ ಆಗಮಿಸಲಿದ್ದು. ನಾಳೆ ಬೆಳಗ್ಗೆಅಜಯ್ ಮಾಕೆನ್, ಜಿಸಿ ಚಂದ್ರಶೇಖರ ಹಾಗೂ ನಾಸಿರ್ ಹುಸೇನ್ ಅವರು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಇನ್ನು ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಒಬ್ಬರು ನಿರಾಯಾಸವಾಗಿ ಈಗಿನ ಸಂಖ್ಯಾಬಲದ ಆಧಾರದ ಮೇಲೆ ಗೆಲ್ಲಬಹುದಾಗಿದೆ. ಅದರಂತೆ ಕಾಂಗ್ರೆಸ್ ಮೂವರು ಅಭ್ಯರ್ಥಿಯನ್ನು ಘೋಷಣೆ ಮಾಡಿದರೆ, ಬಿಜೆಪಿ ತನ್ನ ಪಾಲಿನ ಒಂದು ಸ್ಥಾನಕ್ಕೆ ಓರ್ವ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹೀಗಾಗಿ ಕಾಂಗ್ರೆಸ್ನ ಮೂವರು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.