ಮುಂಬೈ, ಫೆ 14 (DaijiworldNews/ AK): ಮಾಜಿ ಸಂಸದೆ , ನಟಿ ಜಯಪ್ರದಾ ಅವರನ್ನು ಬಂಧಿಸಿ ಫೆಬ್ರವರಿ 27 ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ರಾಂಪುರ ನ್ಯಾಯಾಲಯ ಆದೇಶ ನೀಡಿದೆ.
ಈ ಹಿಂದಿನ ಕೋರ್ಟ್ ಆದೇಶದಂತೆ ನಟಿ ಜಯಪ್ರದಾ ಅವರನ್ನು ಜನವರಿ 10ರೊಳಗೆ ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ, ಪೊಲೀಸರ ಕೈಗೆ ಸಿಗದಂತೆ ಜಯಪ್ರದಾ ತಪ್ಪಿಸಿಕೊಳ್ಳುತ್ತಿದ್ದಾರಂತೆ. ಹಾಗಾಗಿ ಕೋರ್ಟ್ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ವಿಶೇಷ ತಂಡ ರಚಿಸಿ ಮಾಜಿ ಸಂಸರು, ನಟಿಯೂ ಆಗಿರುವ ಜಯಪ್ರದಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿದೆ.
2019ರ ಎರಡು ಪ್ರಕರಣಗಳಲ್ಲಿ ಜಯಪ್ರದಾ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಂಪುರದಿಂದ ಜಯಪ್ರದಾ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದರು. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ನಟಿ ತಲೆಮರೆಸಿಕೊಂಡಿದ್ದಾರೆ.
ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಅಮರನಾಥ್ ತಿವಾರಿ ಅವರು ಏಳನೇ ಬಾರಿಗೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ ನಂತರವೂ ಜಯಪ್ರದಾ ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.