ಬೆಂಗಳೂರು, ಫೆ 14 (DaijiworldNews/AA): ರಾಜ್ಯದಲ್ಲಿ ಶಿಶುಮರಣ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ಬೇಬಿ ಅಂಬುಲೆನ್ಸ್ ಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದ್ದಾರೆ.
ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ ಗಳಿಗೆ ಚಾಲನೆ ನೀಡುವ ಮೂಲಕ ರಾಜ್ಯ ಆರೋಗ್ಯ ಇಲಾಖೆ ಮಹತ್ವ ನಿರ್ಣಯ ಕೈಗೊಂಡಿದೆ. ಈ ಅಂಬುಲೆನ್ಸ್ ಅನ್ನು ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳ ತುರ್ತು ಚಿಕಿತ್ಸೆಗಾಗಿ ಹಾಗೂ ನವಜಾತ ಶಿಶುಗಳಿಗಾಗಿ ರಾಜ್ಯ ಆರೋಗ್ಯ ಇಲಾಖೆ ಪ್ರಾರಂಭಿಸಲಾಗಿದೆ.
ತಾಯಿಯ ಗರ್ಭದಲ್ಲಿದ್ದ ಶಿಶುಗಳು ಹುಟ್ಟಿದ ಬಳಿಕ ಹೊರಗಿನ ಜಗತ್ತಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಈ ವೇಳೆ ಶಿಶುಗಳು ಹಲವು ರೀತಿಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತದೆ. ಈ ಅಂಬುಲೆನ್ಸ್ ಅನ್ನು ವಿಶೇಷವಾಗಿ ಶಿಶುಗಳಿಗಾಗಿ ಪ್ರಾರಂಭಿಸಲಾಗಿದೆ. ಮಗುವನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸುವಾಗ ತುರ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಸೇವೆ ಪ್ರಾರಂಭಿಸಲಾಗಿದೆ. ಸದ್ಯಕ್ಕೆ ಈ ಅಂಬುಲೆನ್ಸ್ ಗಳು ಬೆಂಗಳೂರು, ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯಲ್ಲಿ ಕಾರ್ಯ ನಿರ್ವಹಿಸಲಿದೆ.
ಇನ್ನು ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಅಂಬುಲೆನ್ಸ್ ಗಳು ವೆಂಟಿಲೇಟರ್, ಆಕ್ಸಿಜನ್, ಪಲ್ಸ್ಗಳ ಚೆಕಪ್ ಮತ್ತು ಸೀರೆಂಜ್ಗಳು ಸೇರಿದಂತೆ ಆತ್ಯಾಧುನಿಕ ಜೀವ ರಕ್ಷಕ ಸಾಧನಗಳನ್ನು ಹೊಂದಿವೆ. ಶಿಶುಗಳ ಹೆಚ್ಚಿನ ಚಿಕಿತ್ಸೆಗೆ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಈ ಅಂಬುಲೆನ್ಸ್ಗಳು ಸಹಕಾರಿಯಾಗಲಿವೆ ಎಂದು ತಿಳಿಸಿದ್ದಾರೆ.